ಕುಂದಾಪುರ, ನ 26(SM): ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪತ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿ ಸ್ಥಳೀಯ ವಾಹನಗಳಿಂದ ಬಲವಂತವಾಗಿ ಟೋಲ್ ಸಂಗ್ರಹ ಆರಂಭಿಸಿರುವ ನವಯುಗ ಕಂಪೆನಿ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಪ್ರತಿಭಟನೆ ನಡೆಸಿತು. ರಸ್ತೆಗಿಳಿದು ಸಂಚಾರಕ್ಕೆ ತಡೆಯೊಡಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಸಮಿತಿಯ ಕಾರ್ಯಕರ್ತರು ಟೋಲ್ ಒಳಗೆ ಪ್ರವೇಶಿಸದಂತೆ ಪೊಲೀಸರು ತಡೆದರು. ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಎಎಸ್ಪಿ ಜೈಶಂಕರ್ ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾ ನಿರತರು ಹೆದ್ದಾರಿಯಲ್ಲಿ ಬಲವಂತವಾಗಿ ಟೋಲ್ ವಸೂಲಿ ಮಾಡುವ ಗೂಂಡಾಗಳಿಂದ ರಕ್ಷಣೆ ಬೇಕು. ಉಸ್ತುವಾರಿ ಸಚಿವರ ಸಭೆಯ ಬಳಿಕ ಟೋಲ್ ಸಂಗ್ರಹ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯನ್ನ ವೈಜ್ಞಾನಿಕವಾಗಿ ಮಾಡಬೇಕು, ಅಗತ್ಯವಿರುವೆಡೆ ಸರ್ವಿಸ್ ರಸ್ತೆ, ಫ್ಲೈಓವರ್, ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್, ಆಂಬುಲೆನ್ಸ್ ಗೆ ಪ್ರತ್ಯೇಕ ರಸ್ತೆ ಮಾಡಬೇಕು. ಇದ್ಯಾವುದನ್ನ ಮಾಡದೆ ನವಯುಗ ಸಂಸ್ಥೆ ಟೋಲ್ ಸಂಗ್ರಹಿಸುತ್ತಿದೆ. ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು. ಕೇಂದ್ರ ಸರ್ಕಾರ ಕೂಡಲೇ ನವಯುಗ ಕಂಪೆನಿಯ ಕಿವಿ ಹಿಂಡಬೇಕು. ಈ ಕೂಡಲೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು.
ಮುನ್ನಚ್ಚರಿಕೆಯ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಕಾರ್ಯಕರ್ತರು ಪೊಲೀಸ್ರು ಬಲವಂತವಾಗಿ ಬಂಧಿಸಿ ಕರೆದೊಯ್ದರು. ಇತ್ತ ಸುಮಾರು 200 ಮಂದಿ ಪೊಲೀಸರು ಬೀಗಿ ಬಂದೋಬಸ್ತಿನಲ್ಲಿ ಟೋಲ್ ಸಂಗ್ರಹಣೆ ಮುಂದುವರಿಸಲಾಯಿತು.