ಬೆಂಗಳೂರು, ನ 26(SM): ಮಾಜಿ ಸಚಿವ, ನಟ ಅಂಬರೀಶ್ ಶನಿವಾರದಂದು ವಿಧಿವಶರಾಗಿದ್ದು, ಇಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ನಗರದ ಕಂಠೀರವ ಸ್ಟೂಡಿಯೋದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರೆವೇರಿಸಿದ ಬಳಿಕ ಚಿತೆಗೆ ಬೆಂಕಿ ಹಚ್ಚಲಾಯಿತು. ಅಂಬರೀಶ್ ಪುತ್ರ ಅಭಿಷೇಕ್ ತಂದೆಯ ಚಿತೆಗೆ ಅಂತಿಮ ವಿಧಿವಿಧಾನಗಳನ್ನು ಮಾಡಿದ ಬಳಿಕ ಅಗ್ನಿಸ್ಪರ್ಶ ನೀಡಿದರು.
ಈ ಸಂದರ್ಭ ರಾಜಕೀಯ ನಾಯಕರು, ಸಿನಿಮಾನಟರು ಸೇರಿದಂತೆ ಲಕ್ಷಾಂತರ ಮಂದಿ ಅಂಬರೀಶ್ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಇನ್ನು ಇದೇ ವೇಳೆ ಗಣ್ಯರು ಬಂದು ಅಂಬರೀಶ್ ಚಿತೆಗೆ ಕಟ್ಟಿಗೆ ಹಾಕುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಅಂಬಿ ಚಿತೆಗೆ ಅಗ್ನಿಸ್ಪರ್ಶವಾಗುತ್ತಿದ್ದಂತೆ ಅಭಿಮಾನಿಗಳು ದುಃಖತಪ್ತರಾದರು. ಕಂಠೀರವ ಸ್ಟೂಡಿಯೋ ಶೋಕಸಾಗರದಲ್ಲಿ ಮುಳುಗಿತ್ತು.