ಮಂಗಳೂರು, ನ 27(MSP): ನಗರದ ತಣ್ಣೀರುಬಾವಿ ಬಳಿಯ ತೋಟ ಬೆಂಗರೆ ಎಂಬಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಏಳು ಮಂದಿ ಭಾಗಿಯಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ.
ತೋಟ ಬೆಂಗರೆ ಪ್ರದೇಶದಲ್ಲಿ ನವೆಂಬರ್ 18ರಂದು ಗೆಳೆಯನೊಂದಿಗೆ ವಿಹಾರಕ್ಕೆ ಬಂದಿದ್ದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿ ಅತ್ಯಾಚಾರ ಎಸಗಿದ್ದು, ಮಾಹಿತಿ ಆಧರಿಸಿ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಆಕೆಯ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತೋಟ ಬೆಂಗರೆಯ ಕೆಲವು ಯುವಕರನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳದ ಸಮೀಪದ ಯುವತಿ ಕಾರ್ಖಾನೆ ಯೊಂದರಲ್ಲಿ ಕೂಲಿಗೆ ಹೋಗುತ್ತಿದ್ದಳು. ಆಕೆ ತನ್ನ ಸ್ನೇಹಿತನೊಂದಿಗೆ ನ.18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೋಟ ಬೆಂಗರೆಗೆ ಬಂದಿದ್ದಳು.ಅಲ್ಲಿ ಇಬ್ಬರೂ ಒಟ್ಟಾಗಿ ಹೋಗುತ್ತಿದ್ದಾಗ ತಂಡವೊಂದು ಅಡ್ಡಗಟ್ಟಿ ಇಬ್ಬರನ್ನೂ ಬೆದರಿಸಿದ್ದಾರೆ. ಅಲ್ಲದೆ ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಎಳೆದೊಯ್ದು ದೌರ್ಜನ್ಯ ನಡೆಸಿದ್ದಾರೆ. ಏಳು ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಠಾಣೆಯೊಂದರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಅಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ ಎಂದು ಸಂತ್ರಸ್ತೆ ನಗರ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಆರು ಜನ ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.