ಮಂಗಳೂರು ,ನ 27(MSP): ರಾಜ್ಯದಿಂದ ರಫ್ತಾಗುವ ಮೀನಿಗೆ ಫಾರ್ಮಾಲಿನ್ ಬೆರೆಸಲಾಗುತ್ತದೆ ಎಂದು ಗೋವಾ ಸರಕಾರ ಮೀನು ಅಮದಿಗೆ ನಿಷೇಧ ಹೇರಿದ್ದು, ಅದನ್ನು ರದ್ದುಗೊಳಿಸುವ ಸಂಬಂಧ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸಲು ಕರಾವಳಿಯ ಸಂಸದರು, ಬಿಜೆಪಿ ಶಾಸಕರು ಹಾಗೂ ಮೀನುಗಾರಿಕೆ ಮುಖಂಡರನ್ನೊಳಗೊಂಡ ನಿಯೋಗ ನ.27 ರಂದು ಗೋವಾಕ್ಕೆ ತೆರಳಿದೆ.
ಮಂಗಳವಾರ ಮದ್ಯಾಹ್ನ 2 ಗಂಟೆಗೆ ಸಭೆ ನಿಗದಿಯಾಗಿದ್ದು, ಗೋವಾದ ಸ್ಪೀಕರ್, ಆರೋಗ್ಯ ಸಚಿವ ಹಾಗೂ ಮೀನುಗಾರಿಕೆ ಸಚಿವರೊಂದಿಗೆ ಕರಾವಳಿಯ ಮೀನಿಗೆ ಹೇರಿರುವ ನಿಷೇಧವನ್ನು ಹಿಂಪಡೆಯಲು ನಿಯೋಗ ಮನವಿ ಮಾಡಲಿದೆ.
ಈ ನಿಯೋಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್ , ವೇದವ್ಯಾಸ್ ಕಾಮತ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೋಟ ಶ್ರೀನಿವಾಸ್ ಪೂಜಾರಿ , ಮೀನುಗಾರರ ಮುಖಂಡ ಯಶ್ ಪಾಲ್ ಸುವರ್ಣ , ನಿತಿನಿ ಕುಮಾರ್ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ.
ಕರಾವಳಿಯ ಮೀನಿಗೆ ಫಾರ್ಮಾಲಿನ್ ಬಳಸುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಅಮದಿಗೆ ಇರುವ ೬ ತಿಂಗಳ ನಿಷೇಧ ತೆರವು ಮಾಡುವ ಬಗ್ಗೆ ನಿಯೋಗ ಮಾತುಕತೆ ನಡೆಸಲಿದೆ.