ಮಂಗಳೂರು, ನ 27(MSP): ಪ್ರಜ್ಞಾವಂತರ ನಗರ ಎಂದೇ ಖ್ಯಾತಿ ಪಡೆದ ಮಂಗಳೂರಿನಲ್ಲಿ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈಗಾಗಲೇ ಏಳು ಮಂದಿ ಆರೋಪಿಗಳಲ್ಲಿ ಆರು ಮಂದಿಯನ್ನು ಬಂಧಿಸಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನವೆಂಬರ್ 18ರಂದು ಪ್ರೇಮಿಯೊಂದಿಗೆ ಸುತ್ತಾಡಲು ಬಂದಿದ್ದ ಬಂಟ್ವಾಳ ಮೂಲದ ಯುವತಿಯ ಮೇಲೆ ಏಳು ಮಂದಿ ಕಾಮುಕರು ಅತ್ಯಾಚಾರ ನಡೆಸಿದ ಘಟನೆ ಮಂಗಳೂರು ಹೊರವಲಯದ ತೋಟ ಬೆಂಗ್ರೆ ಬೀಚ್ ನಲ್ಲಿ ನಡೆದಿತ್ತು.ಪ್ರೇಮಿಗಳು ದ್ವೀಪದಲ್ಲಿ ಸುತ್ತಾಡುತ್ತಿದ್ದ ಸಂದರ್ಭ ದಲ್ಲಿ ಅಲ್ಲೆ ಮಾದಕ ವಸ್ತು ಸೇವಿಸುತ್ತಿದ್ದ 7 ಮಂದಿ ಯುವಕರ ಗುಂಪೊಂದು ಯುವತಿ ಜೊತೆಗೆ ಇದ್ದ ಯುವಕನ ಮೇಲೆ ದಾಳಿ ನಡೆಸಿ, ಯುವತಿ ಮೇಲೆ ಅತ್ಯಾಚಾರ ಎಸಗಿತ್ತು.
ಯಾವುದೇ ದೂರು ದಾಖಲಾಗದಿದ್ದರೂ, ತಡವಾಗಿ ಮಾಹಿತಿ ಸಿಕ್ಕಿ, ವಿಶೇಷ ಮುರುವರ್ಜಿವಹಿಸಿ ಪ್ರಕರಣದ ಬೆನ್ನು ಹತ್ತಿದ ಪಣಂಬೂರು ಪೊಲೀಸರು, ಕಠಿಣ ಪರಿಶ್ರಮದ ಮೂಲಕ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಪತ್ತೆ ಹಚ್ಚಿ ಆಕೆಯ ವಿಶ್ವಾಸ ಗಳಿಸಿ ಕೇಸು ದಾಖಲಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಆಕೆ ನೀಡಿದ ಮಾಹಿತಿಯಂತೆ ಹಲವರನ್ನು ವಶ ಪಡೆದು ವಿಚಾರಣೆ ನಡೆಸಿದ್ದಾರೆ. ಕೊನೆಗೂ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗಾಗಲೇ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಣಂಬೂರು ಠಾಣೆಯಲ್ಲಿದ್ದ ಪ್ರಕರಣವನ್ನು ಬಳಿಕ ಹೆಚ್ಚಿನ ತನಿಖೆಗಾಗಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.