ಕಾಸರಗೋಡು,ನ 27(MSP): ರೈಲಿನಿಂದ ಎಸೆಯಲ್ಪಟ್ಟು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಸೋಮವಾರ ತಡರಾತ್ರಿ ಬೇಕಲ ಸಮೀಪದ ಕಳ್ನಾಡ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ತ್ರಿಶ್ಯೂರಿನ ಮುಹಮ್ಮದಾಲಿ (24) ಎಂದು ಗುರುತಿಸಲಾಗಿದೆ. ಮುಂಬೈ ನಲ್ಲಿ ವೆಬ್ ಡಿಸೈನರ್ ಆಗಿದ್ದರು . ಊರಿಗೆ ಬಂದು ಮರಳುತ್ತಿದ್ದಾಗ ಘಟನೆ ನಡೆದಿದೆ. ಮುಂಬೈಯ ತಾಹಿರಾ ಎಂಬಾಕೆಯನ್ನು ಒಂದು ವರ್ಷದ ಹಿಂದೆ ವಿವಾಹ ವಾಗಿದ್ದ ಮುಹಮ್ಮದಾಲಿ ಸೋಮವಾರ ವಿವಾಹ ವಾರ್ಷಿಕ ಕಾರ್ಯಕ್ರಮ ಕಳೆದು ಪತ್ನಿ ಜೊತೆ ಮುಂಬೈ ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ನೇತ್ರಾವತಿ ರೈಲಿನಲ್ಲಿ ತೆರಳುತ್ತಿದ್ದಾಗ ಬೇಕಲ ಬಳಿಯ ಕಳ್ನಾಡ್ ಸುರಂಗ ದಾರಿಯಾಗಿ ಸಂಚರಿಸುತ್ತಿದ್ದಾಗ ಮುಹಮ್ಮದಾಲಿ ಹೊರಕ್ಕೆಸೆಲ್ಪಟ್ಟಿದ್ದು , ಮಂಗಳೂರು ರೈಲು ನಿಲ್ದಾಣ ತಲಪಿದಾಗ ಪತಿ ನಾಪತ್ತೆಯಾದುದರಿಂದ ಗಾಬರಿ ಗೊಂಡ ಪತ್ನಿ ತಾಹಿರಾ ಉಳಿದ ಪ್ರಯಾಣಿಕರು ಮತ್ತು ಪೊಲೀಸರಿಗೆ ತಿಳಿಸಿದ್ದು , ಕಾಸರಗೋಡು ಪೊಲೀಸರನ್ನು ಸಂಪರ್ಕಿಸಿ ಶೋಧ ನಡೆಸಿದಾಗ ಕಳ್ನಾಡ್ ರೈಲ್ವೆ ಸುರಂಗದಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಂಗಳೂರಿನಿಂದ ಆಗಮಿಸಿದ ತಾಹಿರಾ ಗುರುತು ಪತ್ತೆ ಹಚ್ಚಿದರು . ನೀರು ತರಲೆಂದು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ರೈಲಿನಿಂದ ಕೆಳಗೆಸೆಯಲ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಬಗ್ಗೆ ಮುಂಬೈ ಹಾಗೂ ತ್ರಿಶ್ಯೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು , ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಬಿಟ್ಟುಕೊಡಲಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.