ಉಡುಪಿ, ನ 27(SM): ಕರಾವಳಿಯ ಮೀನುಗಾರಿಕೆಗೆ ನಿಷೇಧ ಹೇರಿರುವ ಹಿನ್ನೆಲೆ ಸಂಸದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ, ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರ ಮುತುವರ್ಜಿಯಲ್ಲಿ ನಿಯೋಗವೊಂದು ಗೋವಾ ಸರಕಾರವನ್ನು ಭೇಟಿ ಮಾಡಿತು. ಕರಾವಳಿ ಮೀನುಗಳಿಗೆ ಗೋವಾ ಸರ್ಕಾರದಿಂದ ಹೇರಿದ್ದ ನಿಷೇಧದ ಕುರಿತಾಗಿ ಗೋವಾ ಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗೋವಾ ಸರ್ಕಾರದ ಸಭಾಪತಿ ಡಾ.ಪ್ರಮೋದ್ ಪಿ ಸಾವಂತ್, ಗೋವಾ ಮೀನುಗಾರಿಕಾ ಸಚಿವರಾದ ವಿನೋದ್ ಪಾಲೇಕರ್, ಹಾಗೂ ಮುಖ್ಯ ಕಾರ್ಯದರ್ಶಿ ಧಮೇಂದ್ರ ಶರ್ಮಾರನ್ನು ಭೇಟಿಯಾಗಿ ಕರಾವಳಿ ಕರ್ನಾಟಕದ ಮೀನು ಆಮದು ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ನಿಯೋಗದ ಮನವಿಗೆ ಸಂಪೂರ್ಣವಾಗಿ ಸ್ಪಂಧಿಸಿದ ಗೋವಾ ಸರ್ಕಾರದ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಈ ಹಿಂದಿನಂತೆ ಕರ್ನಾಟಕದ ಮೀನುಗಾರರ ನೆರವಿಗೆ ಧಾವಿಸಲು ಸಿದ್ಧರಿದ್ದೇವೆ ಎಂದರು. ಹಾಗೂ ಈ ಬಗ್ಗೆ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನಿಯೋಗಕ್ಕೆ ನೀಡಿದರು.
ಇನ್ನು ಕಾರವಾರ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ವಾರದ ಕಾಲಾವಕಾಶವನ್ನು ಕೇಳಿದ್ದಾರೆ. ಬಹುತೇಕ ನಿಯೋಗದ ಭೇಟಿ ಯಶಸ್ವಿಯಾಗಿದೆ. ಈ ನಿಯೋಗದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್ , ಭರತ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ರೂಪಾಲಿ ನಾಯ್ಕ, ಮೀನುಗಾರ ಮುಖಂಡರಾದ ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಸತೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.