ಮಂಗಳೂರು, ನ 27(SM): ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳಿವೆ ಬಾವಿಯ ಬಳಿ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗ್ರೆ ನಿವಾಸಿ ಪ್ರಜ್ವಲ್ ಸುವರ್ಣ(25), ತೋಟ ಬೆಂಗ್ರೆ ನಿವಾಸಿ ಅರುಣ್ ಯಾನೆ ಅರುಣ್ ಅಮೀನ್(26), ಆದಿತ್ಯ ಸಾಲಿಯಾನ್ ಯಾನೆ ಆದಿ(25), ಅಬ್ದುಲ್ ರಿಯಾಝ್ ಯಾನೆ ಪಿಟ್ಟೆ(35) ಬಂಧಿತ ಆರೋಪಿಗಳು.
ನವಂಬರ್ 26ರ ಸೋಮವಾರ ಸಂಜೆ 7 ಮಂದಿ ಆರೋಪಿಗಳ ತಂಡ ಯುವತಿಯನ್ನು ಬಲವಂತದಿಂದ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ 7 ಮಂದಿ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 323, 504, 506ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದು ಆರೋಪಿಗಳ ಪತ್ತೆಗಾಗಿ ಪಣಂಬೂರು ಇನ್ ಪೆಕ್ಟರ್ ರಫೀಕ್ ಕೆ.ಎಂ ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ ತಂಡವನ್ನು ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಬಂಧನ ಬಾಕಿ ಇದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.