ಕುಂದಾಪುರ, ನ 27(SM): ಸ್ಥಳೀಯ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡುತ್ತಿರುವ ಕ್ರಮದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರದಂದು ತೀವ್ರ ಸ್ವರೂಪ ಪಡೆಯಿತು. ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ರ ಸಾಸ್ತಾನ ಸಮೀಪ ಬೃಹತ್ ಪ್ರತಿಭಟನೆ ನಡೆಯಿತು. ಬಳಿಕ ಸಂಜೆಯಾಗುತ್ತಿದ್ದಂತೆ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.
ಸಾಸ್ತಾನ-ಗುಂಡ್ಮಿ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ನಡೆದ ತುರ್ತು ಸಭೆಯ ಬಳಿಕ ಟೋಲ್ ಗೆ ಮುತ್ತಿಗೆ ಹಾಕಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದರು. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತಲುಪಿತು.
ಟೋಲ್ ಕೇಂದ್ರದ ಬಳಿ ಜಮಾಯಿಸಿದ ಐನೂರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್ ಸಂಗ್ರಹಕಾರರ ವಿರುದ್ಧ ಘೋಷಣೆ ಕೂಗಿದರು. ಕಳೆದ ಕೆಲವು ದಿನಗಳಿಂದ ಹಲವು ಬಾರಿ ಸಾಸ್ತಾನ ಟೋಲ್ ಬಳಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕೆಂಬ ಬೇಡಿಕೆ ಪ್ರತಿಭಟನಾಕಾರರದ್ದಾಗಿದೆ.