ಮಂಗಳೂರು ನ 28(MSP): ತೋಟ ಬೆಂಗ್ರೆಯಲ್ಲಿ 22 ವರ್ಷದ ಯುವತಿ ಮೇಲ್ ನಡೆದ ಗ್ಯಾಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರನ್ನು ಬಂಧಿಸಿದ್ದಾರೆ.ಮಂಗಳೂರು ಮಹಿಳಾ ಪೊಲೀಸ್ ಠಾಣೆ ಹಾಗೂ ಪಣಂಬೂರು ಠಾಣೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಒಟ್ಟು ಏಳು ಮಂದಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಗಾಂಜಾ ನಶೆಯಲ್ಲಿ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಆರೋಪಿಗಳು ಗಾಂಜಾ ಸೇವನೆ ಚಟ ಅಂಟಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದರ ನಶೆಯಲ್ಲಿ ಇಂಥ ಹೀನ ಕೃತ್ಯ ಎಸಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ನಗರದ ಬೆಂಗ್ರೆ , ಕೂಳೂರು ಸೇರಿದಂತೆ ಪ್ರಮುಖ ಜಂಕ್ಷನ್ ಗಳಲ್ಲಿ ಗಾಂಜಾ ದಂಧೆ ನಡೆಯುತ್ತಿದ್ದು ಇದನ್ನು ಸಂಪೂರ್ಣ ಮಟ್ಟ ಹಾಕುವ ಕೆಲಸವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತೋಟಬೆಂಗ್ರೆಗೆ ತಿರುಗಡಲು ಬಂದ ಪ್ರೇಮಿಗಳ ಪೈಕಿ 18 ವರ್ಷದ ಯುವಕ ಬಿಹಾರ ಮೂಲದವನು , 22 ವರ್ಷದ ಯುವತಿ ಕಲ್ಲಡ್ಕ ನಿವಾಸಿಯಾಗಿದ್ದಾಳೆ. ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಘಟನೆ ಬಳಿಕ ಯುವತಿ ಮನೆಗೆ ತೆರಳಿದ್ದು, ಮರುದಿನ ದೂರು ದಾಖಲಿಸಲು ಬಂಟ್ವಾಳ ಠಾಣೆಗೆ ತೆರಳಿದ್ದಳು. ಘಟನೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರಣ ಅಲ್ಲಿ ದೂರು ನೀಡುವಂತೆ ಪೊಲೀಸರು ಸಲಹೆ ನೀಡಿದ್ದರು. ಆದರೆ ಆಕೆ ಪಣಂಬೂರು ಠಾಣೆಗೆ ಬಂದಿರಲಿಲ್ಲ. ಆರೋಪಿಗಳು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದು, ಆಗಾಗ್ಗೆ ಕರೆ ಮಾಡಿ ಮಂಗಳೂರಿಗೆ ಬರುವಂತೆ ಪೀಡಿಸತೊಡಗಿದ್ದಾರೆ. ಈ ಮಧ್ಯೆ ಅತ್ಯಾಚಾರ ಪ್ರಕರಣ ಬಗ್ಗೆ ಸುದ್ದಿ ಹಬ್ಬಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಪ್ರಕರಣದ ಸಂತ್ರಸ್ಥೆ ಮತ್ತು ಆಕೆಯ ಪ್ರೇಮಿಯನ್ನು ಮಂಗಳವಾರ ನಗರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.