ಉಡುಪಿ, ನ 28(MSP): ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ತಮ್ಮ ದ್ವಿತೀಯ ಪರ್ಯಾಯದ ಯೋಜನೆಯಾದ ಶ್ರೀಕೃಷ್ಣ ದೇವರ ಗರ್ಭಗೃಹದ ಸುವರ್ಣ ಮಾಡಿನ ನಿರ್ಮಾಣ ಕಾರ್ಯದ ಪ್ರಾರಂಭೋತ್ಸವವು ರಾಜಾಂಗಣದಲ್ಲಿ ನ.28 ರ ಬುಧವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಪರ್ಯಾಯ ಶ್ರೀಪಾದರು, ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡುವ ಒಂದು ವರ್ಗದ ಭಕ್ತರಾದರೆ ಬೀದಿಯಲ್ಲಿ ನಿಂತು ಗೋಪುರದಲ್ಲಿ ದೇವರನ್ನು ಕಾಣುವವರು ಇದ್ದಾರೆ.ಗೋಪುರಕ್ಕೆ ಬಂಗಾರದ ಹೊದಿಕೆ ಮಾಡಿಸುವುದೆಂದರೆ ಕೃಷ್ಣ ದೇವರಿಗೆ ಕವಚ ಮಾಡಿಸುವುದೆಂದು ಅರ್ಥ.ಕೃಷ್ಣ ದೇವರು ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದರೂ ಗೋಪಾಲಕರು ಪರ್ವತ ತಮ್ಮ ಮೇಲೆ ಬೀಳುವುದೆಂಬ ಹೆದರಿಕೆಯಿಂದ ಕೋಲು ಹಿಡಿದು ನಿಂತು ತಾವೇ ಎತ್ತಿ ಹಿಡಿದಿದ್ದೇವೆ ಎಂದು ಹೇಗೆ ಭಾವಿಸಿದ್ದರೋ, ಅಂತೆಯೇ ನಾವು ಈ ಗೋಪುರಕ್ಕೆ ನಿಮಿತ್ತ ಮಾತ್ರ ಕೃಷ್ಣ ದೇವರೇ ಕೆಲಸವನ್ನು ಮಾಡಿ ಅದರ ಪುಣ್ಯಾಂಶವು ನಮಗೆ ನೀಡುತ್ತಾರೆ. ಭಕ್ತರು ಮನಸ್ಸನ್ನು ದೇವರಲ್ಲಿಡಬೇಕು. ದೇವರ ಸ್ಮರಣೆ ಮಾಡುವಾಗ ನಮ್ಮ ಚಂಚಲ ಮನಸ್ಸು ಬೆಲೆಬಾಳುವಂತ ಬಂಗಾರದೊಳಗಿರುತ್ತದೆ ಆದುದರಿಂದ ಬಂಗಾರವನ್ನು ದೇವರಿಗೆ ಅರ್ಪಿಸಿದರೆ ಮನಸ್ಸನ್ನು ಸಮರ್ಪಣೆ ಮಾಡಿದಂತಗುತ್ತದೆ ಎಂದು ನುಡಿದರು.
ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥಶ್ರೀಪಾದರು, ಗುರುಗಳಾದ ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಸುವರ್ಣ ರಥ ಮಾಡಿ ಕೃಷ್ಣನಿಗೆ ಅರ್ಪಿಸಿದ ಅವರ ಶಿಷ್ಯರಾದ ವಿದ್ಯಾಧೀಶ ತೀರ್ಥ ಶ್ರೀಪಾದರು ಸುವರ್ಣ ಗೋಪುರ ಮಾಡಿ ಗುರುಗಳ ಹಾಗೂ ಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರುಗಳಾದ ಟಿ.ಎ.ಶರವಣ,ಗೋ.ಮಧುಸೂಧನ್,ಗಣಿ ಉದ್ಯಮಿಗಳಾದ ಪತ್ತಿಗೊಂಡ ಪ್ರಭಾಕರ್, ಐ.ಬಿ.ಎಂ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ನಟರಾಜ್ ರಾಧಾಕೃಷ್ಣನ್,ಬೆಂಗಳೂರಿನ ಸಮರ್ಪಣಾ ಸಮೂಹ ಸಂಸ್ಥೆಗಳ ಸಿ.ಇ.ಓ ದಿಲೀಪ್ ಸತ್ಯ , ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಅಸೋಸಿಯೇಶನಿನ ಅಧ್ಯಕ್ಷರಾದ ಜಯ ಆಚಾರ್ಯ,ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ವಾಸುದೇವ ಅಸ್ರಣ್ಣ,ಕಿದಿಯೂರು ಹೋಟೆಲಿನ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು.
ಈ ಕಾರ್ಯದ ಮೇಲುಸ್ತುವಾರಿಯನ್ನು ವೆಂಕಟೇಶ ಶೇಟ್ ಇವರಿಗೆ ವಹಿಸಿಕೊಟ್ಟು ದೈವಜ್ಞ ಸಮಾಜ ಹಾಗೂ ವಿಶ್ವಕರ್ಮ ಸಮಾಜದವರು ಕಾಷ್ಠ,ಬೆಳ್ಳಿ ಚಿನ್ನದ ಕೆಲಸವನ್ನು ಮಾಡಲಿದ್ದಾರೆ.ವೇಧಿಕೆಯಲ್ಲಿಯೇ ಚಿನ್ನದ ಚೂರುಗಳನ್ನು ಕರಗಿಸಿ ಎರಕ ಹೊಯ್ದು ಅದನ್ನು ಸುತ್ತಿಗೆಯಿಂದ ಬಡಿದು ಹದಮಾಡುವ ಚಾಲನೆ ನೀಡಲಾಯಿತು. ಡಾ.ವೆಂಕಟೇಶ ಆಚಾರ್ಯ ಕೊರ್ಲಳ್ಳಿ ಕಾರ್ಯಕ್ರಮ ನಿರೂಪಿಸಿದರು.ಪರ್ಯಾಯ ಮಠದ ವ್ಯವಸ್ಥಾಪಕರಾದ ಪ್ರಹಲ್ಲಾದ್ ರಾವ್ ಸ್ವಾಗತಿಸಿ,ವಿದ್ವಾನ್.ಮೋಹನ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ, ವಿದ್ವಾನ್ ಗೋಪಾಲಚಾರ್ಯ ಧನ್ಯವಾದ ನೀಡಿದರು.