ಮಂಗಳೂರು ನ 28(MSP): ಶಿವಮೊಗ್ಗ ಜಿಲ್ಲೆಯ ನಾಗರಾಜ ಭಟ್ ಎಂಬ ನಾಗಪಾತ್ರಿಯೋರ್ವರು ಹೆಬ್ರಿಯ ಮನೆಯೊಂದರ ಚಾವಡಿಯಲ್ಲೇ ನಾಗಬಿಂಬ ಇದೆ ಎಂಬ ನುಡಿ ಕೊಟ್ಟು ಚಾವಡಿಯನ್ನೇ ಅಗೆಯುವಂತೆ ಮಾಡಿದ್ದರು. ಸುಮಾರು 6 ಅಡಿಗಳಷ್ಟು ಗುಂಡಿ ತೋಡಿದ ಬಳಿಕ ನಾಗನಕಲ್ಲು ದೊರಕಿ ಸಾಕಷ್ಟು ಸುದ್ದಿ ಮಾಡಿತ್ತು. ಆ ಈ ವಿಚಾರ ಸಾಕಷ್ಟು ವಿವಾದಗಳಿಗೆ ಕಾರಣವಾದ ಬಳಿಕ ಮಾಧ್ಯಮದವರ ಸಮ್ಮುಖದಲ್ಲಿ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗ ಬನದಲ್ಲಿ ತ್ರಿಶೂಲ ಮತ್ತು ನಾಗನ ಕಲ್ಲು ಹೊರ ತೆಗೆದು ಸವಾಲು ಹಾಕಿದ್ದರು.
ಆದರೆ ಇದೀಗ ನಾಗಪಾತ್ರಿ ಜ್ಯೋತಿಷಿ ನಾಗರಾಜ ಭಟ್ ಅವರಿಗೆ ಇದೀಗ ವಿಚಾರವಾದಿ ಮಂಗಳೂರಿನ ನರೇಂದ್ರ ನಾಯಕ್ ಅವರು ಸವಾಲು ಹಾಕಿದ್ದಾರೆ. ಒಂದು ವೇಳೆ ನನ್ನ ಸವಾಲು ಸ್ವೀಕರಿಸಿ ಗೆದ್ದಲ್ಲಿ ತನ್ನಲ್ಲಾ ಆಸ್ತಿಯನ್ನು ಪೂರ್ತಿ ಅವರಿಗೆ ಬರೆದುಕೊಡುವುದಾಗಿ ಹೇಳಿದ್ದಾರೆ.
ಭೂಮಿಯಡಿ ಇರುವ ವಸ್ತುಗಳನ್ನು ಗುರುತಿಸುವ ಇವರಿಗೆ ನಿಜವಾದ ಶಕ್ತಿ ಇರುವುದಾಗಿದ್ರೆ, ಸವಾಲು ಸ್ವೀಕರಿಸಲಿ ಎಂದು ಬಹಿರಂಗವಾಗಿ ಚಾಲೆಂಜ್ ಹಾಕಿದ್ದಾರೆ. ಜ್ಯೋತಿಷಿ ನೀಡುವ ನಾಗನ ಕಲ್ಲನ್ನು ಒಂದು ಪೆಟ್ಟಿಗೆಗೆ ಹಾಕಿ ಅದರಲ್ಲಿ ಮಣ್ಣು ತುಂಬಿಸಿ ಅಷ್ಟೇ ಭಾರವಿರುವ ಒಂದೇ ತೆರೆನಾದ ಹತ್ತು ಪೆಟ್ಟಿಗೆ ಇಡಲಾಗುವುದು. ನಾಗನ ಕಲ್ಲು ಇಟ್ಟ ಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಜತೆಗೆ ಒಂದು ಕರೆನ್ಸಿ ನೋಟು ಅಂಟಿಸಲಾಗುವುದು. ಸವಾಲು ಸ್ವೀರಿಸಿದ ಜ್ಯೋತಿಷಿ ಯಾವ ಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಇದೆ ಎಂದು ಹೇಳಬೇಕು. ಮಾತ್ರವಲ್ಲದೆ ನಾಗನ ಮೂರ್ತಿ ಪೆಟ್ಟಿಗೆಯಲ್ಲಿ ಇಡಲಾದ ಕರೆನ್ಸಿ ಯಾವ ದೇಶದ್ದು, ಅದರ ಮೌಲ್ಯ ಎಷ್ಟು ಮತ್ತು ಅದರ ಸೀರಿಯಲ್ ನಂಬರ್ ಏನು ಎನ್ನುವುದನ್ನು ತಿಳಿಸಬೇಕು. ಈ ಸವಾಲು ಗೆದ್ದರೆ ನನ್ನೆಲ್ಲಾ ಆಸ್ತಿಯನ್ನು ನಾಗಪಾತ್ರಿಗೆ ಬರೆದುಕೊಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.