ಹೈದರಾಬಾದ್, ನ 28(MSP): ತೆಲಂಗಾಣದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ತೃತೀಯ ಲಿಂಗಿ ಅಭ್ಯರ್ಥಿಯೊಬ್ಬರು ನಿಗೂಢವಾಗಿ ಕಣ್ಮರೆಯಾಗಿದ್ದು, ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಎಂ. ಚಂದ್ರಮುಖಿ(32) ನಾಪತ್ತೆಯಾಗಿರುವ ತೃತೀಯ ಲಿಂಗಿ ಅಭ್ಯರ್ಥಿ.
ಹೈದರಾಬಾದ್ನ ಗೋಷಮಹಲ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ(ಎಂ) ನೇತೃತ್ವದ ಬಹುಜನ ಎಡ ರಂಗ ಪಕ್ಷದಿಂದ ಸ್ಪರ್ಧಿಸಿದ್ದ ಎಂ. ಚಂದ್ರಮುಖಿ ಇವರು ಕಾಂಗ್ರೆಸ್ ನಾಯಕ ಮುಕೇಶ್ ಗೌಡ್ ಮತ್ತು ಬಿಜೆಪಿ ಪ್ರಬಲ ಅಭ್ಯರ್ಥಿ ಟಿ. ರಾಜಾ ಸಿಂಗ್ ಅವರ ವಿರುದ್ಧ ಸ್ಪರ್ಧಿಸಿದ್ದರು. ಇವರು ನಿನ್ನೆಯಿಂದ ನಾಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಚಂದ್ರಮುಖಿ ಪರ ಪ್ರಚಾರಕ್ಕೆ ಬೆಂಬಲಿಗರು ಅವರ ಮನೆ ಬಳಿ ಬಂದಾಗ ಅವರು ಪತ್ತೆಯಾಗಿರಲಿಲ್ಲ. ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ದಿನವಿಡಿ ಹುಡುಕಾಟದ ಬಳಿಕ ಅವರ ಸಮುದಾಯವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಂದ್ರಮುಖಿ ಅವರು ಪ್ರಚಾರ ಕಣಕ್ಕಿಳಿದು ಕೇವಲ ಒಂದು ದಿನದ ಮಾತ್ರ ಕಳೆದಿತ್ತು. ಆದರೆ ಅದರ ಮರುದಿನವೇ ಆಕೆಯ ಕಣ್ಮರೆಯಾಗಿರುವುದು ಇದೀಗ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.