Karavali
ಕುಂದಾಪುರ: ಜಿ.ಪಂ.ಸದಸ್ಯರನ್ನು ಪಿಎಸ್ಐ ತಳ್ಳಿದ ಪ್ರಕರಣ : ಇದು ಬ್ರಿಟಿಷ್ ಸರ್ಕಾರವೇ? ಶಾಸಕ ಸುಕುಮಾರ ಶೆಟ್ಟಿ ಕಿಡಿ
- Wed, Nov 28 2018 05:00:14 PM
-
ಕುಂದಾಪುರ,ನ 28(MSP): ಮೂವತ್ತು ಸಾವಿರ ಜನರನ್ನು ಪ್ರತಿನಿಧಿಸುವ ಓರ್ವ ಜನಪ್ರತಿನಿಧಿಗೆ ಗೌರವ ಇಲ್ಲವೇ? ನೊಂದವರ ಪರವಾಗಿ ಧ್ವನಿಯೆತ್ತಿದ ಜಿ.ಪಂ.ಸದಸ್ಯರನ್ನು ತಳ್ಳಿದ ಪಿಎಸ್ ಅವರ ವರ್ತನೆ ಖಂಡನಾರ್ಹ. ಇದು ಬ್ರಿಟಿಷ್ ಸರ್ಕಾರವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇದೇನು ಜಂಗ್ಲಿ ಕಾನೂನು? ಜನಪ್ರತಿನಿಧಿಯ ಜೊತೆ ಹೇಗೆ ವರ್ತಿಸಬೇಕು ಎನ್ನುವುದು ಗೊತ್ತಿಲ್ಲದ ಅಧಿಕಾರಿಗಳ ವಿರುದ್ಧ ಇನ್ನೂ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇನ್ನೂ ಈ ರೀತಿ ಪುನರವರ್ತನೆಯಾಗಬಾರದು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು. ಶಿರೂರಿನಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿ ಮಟ್ಕಾ ದಂಧೆಯನ್ನು ಡಿವೈಎಸ್ಪಿ ನೇತೃತ್ವದಲ್ಲಿ ನಿಲ್ಲಿಸುವ ಕೆಲಸವಾಗಿದೆ. ಅದನ್ನು ನಾವು ಮೆಚ್ಚುತ್ತೇವೆ. ಆದರೆ ಬೈಂದೂರು ಪಿಎಸ್ಐ ವರ್ತನೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ವಿಷಯ ಪ್ರಸ್ತಾವಿಸಿದ ಜಿ.ಪಂ.ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಶಿರೂರು ಜಿ.ಪಂ ಸದಸ್ಯರು ಜನರ ಪರವಾಗಿ ಠಾಣೆಗೆ ಹೋದರೆ ಅವರನ್ನು ತಳ್ಳುವ ಮೂಲಕ ಅಧಿಕಾರಿಗಳು ಅಗೌರವ ತೋರಿದ್ದಾರೆ. ಈಗ ಸರ್ಕಾರ ಪುನಃ ಅವರನ್ನು ಅದೇ ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ನೀಡಿದ್ದಾರೆ. ಇದು ಒಬ್ಬ ಜನಪ್ರತಿನಿಧಿಗೆ ತೋರುವ ಅಗೌರವಲ್ಲವೇ ಎಂದು ಪ್ರಶ್ನಿಸಿದರು.
ಜಿ.ಪಂ.ಸದಸ್ಯ ಸುರೇಶ ಬಟ್ವಾಡಿ ಮಾತನಾಡಿ, ನಾನು ಯಾವತ್ತೂ ದುರ್ವರ್ತನೆ ಮಾಡಿದವನಲ್ಲ. ಪೊಲೀಸ್ ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆ ದಿನ ಸಾರ್ವಜನಿಕರೊಬ್ಬರ ವಿಚಾರದ ಸಲುವಾಗಿ ಠಾಣೆಗೆ ಹೋದಾಗ ಈ ಘಟನೆ ನಡೆದಿದೆ. ಈ ಬಗ್ಗೆ ದೂರು ನೀಡಲು ಹೋದಾಗ ಸ್ವೀಕಾರ ಮಾಡಲಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ದಿನೇಶ ಕುಮಾರ್ ಆಗ ಸುರೇಶ ಬಟವಾಡೆಯವರು ಲಿಖಿತವಾಗಿ ದೂರು ನೀಡಲಿಲ್ಲ. ಕೇಸು ಸಹ ಕೊಡಲಿಲ್ಲ. ಲಿಖಿತವಾಗಿ ದೂರು ನೀಡಿದ್ದರೆ ಕ್ರಮ ಕೈಗೊಳ್ಳಲು ಸಾಧ್ಯತೆ ಇತ್ತು. ಈಗಲೂ ಕೂಡಾ ಲಿಖಿತವಾಗಿ ದೂರು ನೀಡಲು ಸಾಧ್ಯತೆಯಿದೆ ಎಂದರು.
ಕಂದಾಯ ಇಲಾಖೆ ೯೪ಸಿಯಲ್ಲಿ ಅರ್ಜಿ ಅಲ್ಲಿಸಿದ ಆರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಬೇಕು. ಅರಣ್ಯ ಇಲಾಖೆ ಡಿಮ್ಡ್ ಫಾರೆಸ್ಟ್ ವಿನಾಯತಿಗೊಳಿಸಿದ ಮೇಲೆ ಹಕ್ಕುಪತ್ರ ಕೊಡಲು ತೊಂದರೆ ಏನು ? ೯೪ಸಿಯಲ್ಲಿ ಅರ್ಜಿ ಸಲ್ಲಿಸುವವರು ಬಡವರು ಅವರಿಗೆ ಜಾತಿ, ಪಕ್ಷ ಇರುವುದಿಲ್ಲ. ಬಡವರ ಕೆಲಸ ದೇವರ ಕೆಲಸ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಹಶೀಲ್ದಾರ್ರಿಗೆ ಸೂಚಿಸಿದರು.
ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಮಾತನಾಡಿ ಹೊಸಂಗಡಿಯಲ್ಲಿ ಸುಮಾರು ೫೦ ಕುಟುಂಬಗಳು ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿವೆ. ಅರಣ್ಯ ಇಲಾಖೆ ವಿನಾಯತಿ ನೀಡಿದರೂ ಕೂಡಾ ಮಂಜೂರಾತಿ ನೀಡುವ ಕೆಲಸವಾಗಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅಲ್ಲಿ ಸರ್ಕಾರಿ ತೆರಿಗೆಯ ಸಮಸ್ಯಯಿದೆ.ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅವರ ಅದೇಶಕ್ಕೆ ಕಾಯಲಾಗುತ್ತಿದೆ ಎಂದರು.
ಕೃಷಿ ಇಲಾಖೆಯ ವತಿಯಿಂದ ನೀಡುವ ಸವಲತ್ತುಗಳು ಸಿಕ್ಕಿದವರಿಗೆ ಪದೇ ಪದೇ ಸಿಗಬಾರದು. ಆರ್ಹ ಎಲ್ಲ ರೈತರಿಗೂ ಸಿಗುವಂತೆ ನೋಡಿಕೊಳ್ಳಿ. ಗ್ರಾಮ ಗ್ರಾಮಕ್ಕೂ ತೆರಳಿ ಮಾಹಿತಿ ನೀಡಿ. ಕಳೆದ ವರ್ಷ ಎಂ.ಓ.೪ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ಈ ಬಾರಿ ಜಿಲ್ಲೆಗೆ ಬೇಕಾಗುವಷ್ಟು ಬಿತ್ತನೆ ಬೀಜ ಸಂಗ್ರಹಣೆ ಮಾಡಿಕೊಳ್ಳಿ ಎಂದು ಶಾಸಕರು ಕೃಷಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೆಡಿಪಿ ಸದಸ್ಯ ಪ್ರಸನ್ನಕುಮಾರ್ ಶೆಟ್ಟಿ ಮಾತನಾಡಿ ಕೃಷಿ ನಿರತನಾಗಿದ್ದ ವ್ಯಕ್ತಿ ಅಕಸ್ಮಿಕ ಮರಣ ಹೊಂದಿದ್ದರೆ ಪರಿಹಾರ ಸಿಗುತ್ತದೆ. ಆದರೆ ಬೆಳ್ಳಾಲದಲ್ಲಿ ಗೋಪಾಲ ಶೆಟ್ಟಿ ಎನ್ನುವ ರೈತ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟು ಹಲವು ದಿನ ಕಳೆದರೂ ಇಲಾಖೆ ಮಹಜರು ಮಾಡುವ ಕಾರ್ಯ ಮಾಡಿಲ್ಲ ಎಂದರು.
ಕೃಷಿ ಅಧಿಕಾರಿಗಳು ಉತ್ತರಿಸಿ ಈಬಾರಿ ಎಂಓ೪ ಬಿತ್ತನೆ ಬೀಜವನ್ನು ೨೦೦೦ ಕ್ವಿಂಟಾಲ್ ಸಂಗ್ರಹ ಮಾಡಲಾಗುತ್ತಿದೆ. ಉತ್ತಮ ಬೀಜೋತ್ಪದನೆ ಆಗಿದೆ. ಸವಲತ್ತುಗಳ ವಿತರಣೆಯಲ್ಲೂ ಸರ್ಕಾರದ ಮಾನದಂಡಗಳಂತೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದರು.
ತೋಟಗಾರಿಕಾ ಇಲಾಖೆಯಿಂದ ಕೊಳೆ ರೋಗ ಪರಿಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ತೋಟಗಾರಿಕಾ ಅಧಿಕಾರಿ ಸಂಜೀವ ನಾಯ್ಕ್ ಅವರು ಮಾತನಾಡಿ ಕೊಳೆ ರೋಗಕ್ಕೆ ಸಂಬಂಧಪಟ್ಟಂತೆ ೩ ಕೋಟಿ ರೂಪಾಯಿ ತಾಲೂಕಿಗೆ ಬರಬೇಕಿದೆ. ಇಲಾಖೆಯ ಸಹಾಯಧನವನ್ನು ಫಲನುಭವಿಗಳ ಖಾತೆಗೆ ನೇರವಾಗಿ ಹಾಕಲಾಗುತ್ತಿದೆ. ಸೌಲಭ್ಯ ಪಡೆದ ಎಲ್ಲಾ ಫಲನುಭವಿಗಳ ಪಟ್ಟಿ ನಮ್ಮ ಬಳಿ ಲಭ್ಯವಿದೆ ಎಂದರು.
ಕೊಳೆ ರೋಗದ ಪರಿಹಾರದ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೇನೆ. ಭರವಸೆ ಸಿಕ್ಕಿದೆ ಎಂದು ಶಾಸಕರು ತಿಳಿಸಿದರು. ಕೆಡಿಪಿ ಸದಸ್ಯ ದೇವಾನಂದ ಶೆಟ್ಟಿ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ತಿಳಿಸಿದರು. ಜಿ,ಪಂ.ಸದಸ್ಯೆ ಶೋಭಾ ಪುತ್ರನ್ ಸೇವಂತಿ ಕೃಷಿಗೆ ಸಹಾಯಧನ ಕುರಿತು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಸೇವಂತಿ ಕೃಷಿ ಸಹಾಯಧನ ಖಾತೆಗೆ ಬರುತ್ತದೆ. ವಾರದಲ್ಲಿ ಸೇವಂತಿ ಕೃಷಿ ತರಬೇತಿಯನ್ನು ಪುಷ್ಪಕೃಷಿ ವಿಭಾಗದವರು ಮಾಡುತ್ತಾರೆ ಎಂದರು.
ಪಾಲನಾ ವರದಿ, ಅಧಿಕಾರಿಗಳ ಸ್ಪಂದನೆಯ ಬಗ್ಗೆ ಶ್ರೀಲತಾ ಸುರೇಶ ಶೆಟ್ಟಿ ಅಸಮಾದಾನ ವ್ಯಕ್ತ ಪಡಿಸಿದರು. ಜಿ.ಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಅವರು ಮಾತನಾಡಿ ಅಧಿಕಾರಿಗಳು ಸಭೆಗೆ ಹಾರಿಕೆಯ ಉತ್ತರ ನೀಡಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ತಾಳ್ಮೆ ಇರಬೇಕು. ಕೆಡಿಪಿ ಸಭೆಗೆ ಮಹತ್ವ ಇದೆ ಅಸಡ್ಡೆ ಮಾಡಬಾರದು ಎಂದರು. ಜಿ.ಪಂ.ಸದಸ್ಯೆ ಗೌರಿ ದೇವಾಡಿಗ, ಶಂಕರ ಪೂಜಾರಿ, ಸುಪ್ರಿತಾ ಕುಲಾಲ್, ಸಮಸ್ಯೆಗಳ ಸಭೆಯ ಗಮನಕ್ಕೆ ತಂದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿ.ಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೆಕರ್, ತಹಶೀಲ್ದಾರ್ ತಿಪ್ಪೆಸ್ವಾಮಿ, ಕಿರಣ್ ಗೌರಯ್ಯ, ಡಿವೈಎಸ್ಪಿ ದಿನೇಶ ಕುಮಾರ್ ಉಪಸ್ಥಿತರಿದ್ದರು.
ಆರೋಗ್ಯ ಕರ್ನಾಟಕ ಅಸಮಾಧಾನ
ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನವಾಗಿದೆ ಎನ್ನಲಾಗುತ್ತಿದೆ. ಆದರೆ ಅದರ ಪ್ರಯೋಜನ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಬಡವರಿಗೆ ಇದರ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು ಎಂದು ಜಿ.ಪಂ ಸದಸ್ಯೆ ಶೋಭಾ ಪುತ್ರನ್ ಸಭೆಯ ಗಮನ ಸಳೆದರು.
ಇದಕ್ಕೆ ಉತ್ತರಿಸಿದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ರೋಬರ್ಟ್ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ನೊಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ತುರ್ತು ಚಿಕಿತ್ಸೆ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆಯನ್ವಯ ಉಚಿತವಾಗಿ ಸಿಗುತ್ತದೆ ಎಂದರು.