ಬೆಳ್ತಂಗಡಿ, ಅ 16: ತಾಲೂಕಿನ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ಅಳದಂಗಡಿ ಪೇಟೆಯಲ್ಲಿ ಸೋಮವಾರ ಮುಂಜಾನೆ ಸರಣಿ ಕಳ್ಳತನದ ಘಟನೆ ನಡೆದಿದೆ.
ಪೇಟೆಯಲ್ಲಿನ 6 ವಿವಿಧ ಅಂಗಡಿಗಳ ಶೆಟರ್ಗಳನ್ನು ಮೇಲಕ್ಕೆ ಬಾಗಿಸಿ ಕಳ್ಳತನವಾಗಿದ್ದು ಸಾವಿರಾರು ನಗದು ಹಾಗೂ ವಸ್ತುಗಳನ್ನು ಕದ್ದೊಯ್ಯಲಾಗಿದೆ.
ರವಿರಾಜ್ ಜೈನ್ ಅವರ ಪದ್ಮಾಂಬಾ ಕಾಂಪ್ಲೆಕ್ಸ್ನಲ್ಲಿರುವ ಸರೋಜಿನಿ ಎಂಬುವರ ಮಾಲಕತ್ವದ ಶ್ರೀ ಫ್ಯಾನ್ಸಿ ಅಂಗಡಿಯಿಂದ ರೂ. 3000 ನಗದು, ಮೋಹನ ನಾಯ್ಕ ಎಂಬುವರ ಜೆ.ಎನ್. ಎಂಟೈರ್ಪ್ರೈಸಸ್ನಿಂದ ರೂ. 1600, ಪ್ರಶಾಂತ ಎಂಬುವರ ಶ್ರೀರಾಮ ಇಲೆಕ್ಟ್ರಿಕಲ್ಸ್ ನಿಂದ ರೂ. 3500, ದಿಲೀಪ್ ಚಕ್ರವರ್ತಿ ಅವರ ಪ್ರತೀಕ್ ಟೆಕ್ಸ್ಟೈಲ್ಸ್ ಎಂಡ್ ಗಾರ್ಮೆಂಟ್ಸ್ನಿಂದ ರೂ. 9070 ನಗದು ಹಾಗೂ ರೂ 20 ಸಾವಿರ ರೂ. ಮೌಲ್ಯದ ಸೀರೆಗಳು, ದರ್ಣಪ್ಪ ಪೂಜಾರಿ ಅವರ ಟ್ರೇಡರ್ಸ್ ನಿಂದ ರೂ. 5000 ಹಾಗೂ ಅಳದಂಗಡಿ ಸಿ.ಎ.ಬ್ಯಾಂಕ್ ಮಾಲಕತ್ವದ ವಾಣಿಜ್ಯ ಸಂಕೀರ್ಣದಲ್ಲಿರುವ ಶ್ರೀಧರ ಮೂಲ್ಯ ಅವರಿಗೆ ಸೇರಿದ ಗಾಯತ್ರಿ ಟೆಕ್ಸ್ಟೈಲ್ಸ್ನಿಂದ ರೂ.1200 ನಗದು ಹಾಗೂ 4 ಸಾವಿರ ರೂ. ಮೌಲ್ಯದ ಸೀರೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಟ್ಟು ರೂ. 15270 ನಗದು ಹಾಗೂ ರೂ. 24 ಸಾವಿರ ರೂ. ಮೌಲ್ಯದ ಬಟ್ಟೆಬರೆಗಳ ಕಳ್ಳತನವಾಗಿದೆ.
ಸುಮಾರು ಮುಂಜಾನೆ 1 ಗಂಟೆಯಿಂದ 4 ಗಂಟೆಯೊಳಗೆ ಈ ಕೃತ್ಯ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಪೇಟೆಯಲ್ಲಿನ ಬೇರೆ 3 ಕಟ್ಟಡಗಳಲ್ಲಿ ಸಿಸಿ ಕ್ಯಾಮರಾಗಳಿದ್ದು ಅವುಗಳಿಂದ ಏನಾದರೂ ಸುಳಿವು ಸಿಗಲಿದೆಯೇ ಎನ್ನುವುದರ ಬಗ್ಗೆ ಪೋಲಿಸರು ತನಿಖೆ ನಡೆಸಲಿದ್ದಾರೆ. ಶ್ವಾನದಳದೊಂದಿಗೆ ಸ್ಥಳಕಾಗಮಿಸಿದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.