ವರದಿ:ಹರ್ಷಿಣಿ ಬ್ರಹ್ಮಾವರ
ಉಡುಪಿ,ನ 29 (MSP): ಬಹುಶಃ ನ್ಯೂನ್ಯತೆ ಪ್ರತಿಯೊಬ್ಬರಲ್ಲೂ ಇರಬಹುದು ಅಥವಾ ಬರಬಹುದು. ಆದರೆ ಅದನ್ನು ಮೀರಿನಿಂತಾಗ ಬದುಕಿನಲ್ಲಿ ಸಾಧನೆ ಮಾಡಬೇಕೆಂಬ ಛಲ ಬರುತ್ತದೆ. ಲಿಂಗತ್ವ ಅಲ್ಪಸಂಖ್ಯಾರಾಗಿದ್ದರೂ ತಮ್ಮ ಜೀವನದಲ್ಲಿ ಬಂದಂತಹ ಸವಾಲುಗಳುಗಳನ್ನು ಎದುರಿಸುತ್ತಾ, ಸ್ವಾವಲಂಭಿ ನಡೆಸುತ್ತಿರುವ ವ್ಯಕ್ತಿ ಸಂಜೀವ್ ವಂಡ್ಸೆ ಇತರರಿಗೂ ಮಾದರಿಯಾಗಿದ್ದಾರೆ.
ಚಿಕ್ಕಂದಿನಿಂದಲೇ ಬಡಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸವಿಲ್ಲದೆ ವಂಚಿರರಾದರೂ ಸಣ್ಣ ವಯಸ್ಸಿನಲ್ಲಿಯೇ, ಸಣ್ಣ ಪುಟ್ಟ ಹೋಟೆಲು ಕೆಲಸಗಳನ್ನು ಮಾಡುತ್ತಾ ಮನೆಯ ಜವಾಬ್ದಾರಿ ತಮ್ಮ ಹೆಗಲೇರಿಸಿಕೊಂಡರು.ತಮ್ಮ ಜೀವನೋಪಾಯಕ್ಕಾಗಿ ತೃತೀಯ ಲಿಂಗಿಗಳು ಸಾಮಾನ್ಯವಾಗಿ ಭಿಕ್ಷಾಟನೆ ಅಥವಾ ಲೈಂಗಿಕ ಚಟುವಟಿಕೆಗೆ ತೊಡಗಿಸಿಕೊಳ್ಳುತ್ತಾರೆ ಎನ್ನುವ ಭಾವನೆ ಇದೆ. ಆದರೆ ಸಂಜೀವ ವಂಡ್ಸೆ ಇವರೆಲ್ಲರಿಗಿಂತ ಭಿನ್ನ. ತನ್ನದೇ ದಾರಿಯನ್ನು ಕಂಡುಕೊಂಡ ಅವರು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ 'ಆಸರೆ' ಪಾಸ್ಟ್ ಫುಡ್' ಎನ್ನುವ ಮೊಬೈಲ್ ಕ್ಯಾಂಟೀನೊಂದನ್ನು ಮಣಿಪಾಲದಲ್ಲಿ ಸ್ಥಾಪಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಮಣಿಪಾಲದ ಬ್ಯಾಂಕ್ ಒಂದರಲ್ಲಿ ಒಂದು ಲಕ್ಷ ಸಾಲ ಪಡೆದು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ 20,000 ರೂ ಸಹಾಯಧನ ಪಡೆದು ಇದನ್ನು ಸ್ಥಾಪಿಸಿದ್ದಾರೆ. ಅಲ್ಲದೆ ತನ್ನ ಕ್ಯಾಂಟೀನಲ್ಲಿ ಮೂರು ಜನರಿಗೆ ಕೆಲಸವನ್ನು ನೀಡಿರುವ ಸಂಜೀವ ವಂಡ್ಸೆ , ಕ್ಯಾಂಟೀನಲ್ಲಿ ಬಂದ ಲಾಭದಲ್ಲಿ ಎಚ್ಐವಿ ಪೀಡಿತ 10 ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಔಷಧಕ್ಕೆ ಮೀಸಲಿಟ್ಟಿದ್ದಾರೆ.
ಇವರ ಶ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಕ್ಯಾಂಟೀನ್ ಸ್ಥಾಪಿಸಿ ಎರಡು ತಿಂಗಳಲ್ಲಿ ಹೋಟೆಲ್ ಬರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರಿಗೆ ಹೋಟೆಲ್ ತೆರೆದಿದ್ದು ಜನರಿಗೆ ಕಡಿಮೆ ದರದಲ್ಲಿ ಊಟ ನೀಡಲಾಗುತ್ತಿದೆ.
ಸದ್ಯ 41 ವರ್ಷ ಹರೆಯದ ಸಂಜೀವ ತಮ್ಮ ಮರಣದ ಬಳಿಕ ಶರೀರವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾನ ನೀಡಲು ನೋಂದಣಿ ಮಾಡಿದ್ದಾರೆ. ಒಟ್ಟಿನಲ್ಲಿ ಸಂಜೀವ ವಂಡ್ಸೆ ತಮ್ಮ ಕಷ್ಟದ ನಡುವೆಯೂ ಬಿಕ್ಷಾಟನೆಯ ಹಾದಿ ಹಿಡಿಯದೆ ಉದ್ಯೋಗದ ಹಾದಿ ಹಿಡಿದಿದ್ದಾರೆ. ಕ್ಯಾಂಟೀನ್ನನ್ನು ಆರಂಭಿಸಿ ಇತರ ತೃತೀಯ ಲಿಂಗಿಗಳಿಗೆ ಮಾದರಿಯಾಗಿದ್ದಾರೆ.
ಈ ಹಿಂದೆ ಮಂಗಳೂರಿನ ದಿ. ವೀಣಾಧರಿ ಜೊತೆಗೆ ಕೆಲಸ ಮಾಡಿರುವ ಸಂಜೀವ ವಂಡ್ಸೆ ಅವರು, ಉಡುಪಿಯ ಜೀವನ ಸಂಘರ್ಷ, ಬೇಳೂರಿನ ಸ್ಪೂರ್ತಿಧಾಮ, ಉಡುಪಿಯ ದೀಪಜ್ಯೋತಿ, ಗಾರ್ಡ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್, ಕೆ.ಎನ್.ಪಿ. ಪ್ಲಸ್, ಬೆಂಗಳೂರಿನ ಸಂಗಮ, ಕರ್ನಾಟಕ ಎಚ್.ಐ.ವಿ. ಸೋಂಕಿತರ ಸಂಘಟನೆ, ಕರ್ನಾಟಕ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆ, ಬೆಂಗಳೂರಿನ ಸಾರಥ್ಯ ಮೊದಲಾದ ಸರಕಾರೇತರ ಸ್ವಯಂಸೇವಾ ಸಂಸ್ಥೆಯಲ್ಲಿ ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ, ಉಡುಪಿಯ ಆಶ್ರಯ ಸಮುದಾಯ ಸಂಘಟನೆಯಲ್ಲಿ ಆಪ್ತ ಸಮಾಲೋಚಕರಾಗಿರುವ ಸಂಜೀವ ವಂಡ್ಸೆ ಅವರು, ಎಚ್.ಐ.ವಿ./ಏಡ್ಸ್ ಬಾಧಿತರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ, ಅವರ ಹಕ್ಕಿನ ರಕ್ಷಣೆಗಾಗಿ ಪಣ ತೊಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ (ತೃತೀಯ ಲಿಂಗಿ) ಸೇರಿರುವ ಸಂಜೀವ ಸುವರ್ಣ ವಂಡ್ಸೆ ಅವರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲರಂತೆ ಬದುಕಬೇಕು ಎಂಬ ಛಲದಿಂದ ಪಾಸ್ಟ್ ಫುಡ್ ಸೆಂಟರ್ ತೆರೆದಿದ್ದಾರೆ.
‘ಲಿಂಗತ್ವ ಅಲ್ಪಸಂಖ್ಯಾತರು (ತೃತೀಯ ಲಿಂಗಿ) ಭಿಕ್ಷಾಟನೆ ಹಾಗೂ ಲೈಂಗಿಕ ವೃತ್ತಿ ಮಾಡಿಯೇ ಬದುಕು ಬೇಕು ಎಂದಿಲ್ಲ. ಗೌರವಯುತವಾದ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಸಮಾಜ ಎಲ್ಲರನ್ನೂ ಸಮಾನವಾಗಿ ನೋಡಿದರೆ ಇದು ಸಾಧ್ಯ’ ಎಂದು ದಾಯ್ಜಿವರ್ಲ್ಡ್ ನೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ವಂಡ್ಸೆ ಸಂಜೀವ ಸುವರ್ಣ ಕುಂದಾಪುರ ತಾಲ್ಲೂಕಿನವರು. ಲಿಂಗತ್ವ ಅಲ್ಪಸಂಖ್ಯಾತ (ತೃತೀಯ ಲಿಂಗಿ) ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಹುಟ್ಟೂರಿನಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದ್ದರು. ನೋವು ನುಂಗಿಕೊಂಡು ಅಲ್ಲಿಂದ ಉಡುಪಿಗೆ ಬಂದು ನೆಲೆ ನಿಂತಿದ್ದಾರೆ. ಎಚ್.ಐ.ವಿ ಪೀಡಿತ ಮಕ್ಕಳ ಹಾಗೂ ತೃತೀಯ ಲಿಂಗವರ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವಲ್ಲೂ ಮುಂಚೂಣಿಯಲ್ಲಿದ್ದಾರೆ.
‘2 ತಿಂಗಳ ಹಿಂದೆತೃತೀಯ ಲಿಂಗಿ ಎಂಬ ಕಾರಣಕ್ಕೆ ಮನೆಯಿಂದ ಹೊರದೂಡಲ್ಪಟ್ಟ ಯುವಕನ ಜತೆ ಸೇರಿ ಸ್ವಉದ್ಯೋಗ ಆರಂಭಿಸಿದ್ದೇನೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ನಗರಸಭೆ ಸಹಕಾರದಿಂದ ಮಣಿಪಾಲ ಬಸ್ ನಿಲ್ದಾಣದ ಬಳಿ ಹೋಟೆಲ್ ಆರಂಭಿಸಲು ಸ್ಥಳಾವಕಾಶ ಸಿಕ್ಕಿದೆ. ಆದರೆ ಇವರಿಗೆ ಮಣಿಪಾಲ ಹಾಗೂ ಮಲ್ಪೆ ರಸ್ತೆ ವಿಸ್ತರಣೆ ಆರಂಭವಾಗುತ್ತಿದೆ. ಇದರಿಂದಾಗಿ ಹೋಟೆಲ್ ಎತ್ತಂಗಡಿಯಾಗುವ ಆತಂಕ ಕಾಡುತ್ತಿದೆ ಎಂದರು.’ ಎಂದು ಸಂಜೀವ ಸುವರ್ಣ ಹೇಳಿದರು.
ಹುಟ್ಟಿನಿಂದಲೇ ತಂದೆ ತಾಯಿ ಕಳೆದುಕೊಂಡಿದ್ದೇನೆ. ಸ್ವಾವಲಂಬಿ ಜೀವನ ನಡೆಸಲು ಸ್ವಉದ್ಯೋಗ ಆರಂಭಿಸಿದ್ದೇನೆ. ಬರುವ ಆದಾಯದಲ್ಲಿ 10 ವರ್ಷಗಳಿಂದ ಅನಾರೋಗ್ಯ ಪೀಡಿತನಾಗಿರುವ ಅಣ್ಣನ ಆರೈಕೆ ಮಾಡುತ್ತಿದ್ದೇನೆ ಎಂದರು.
ಹುಟ್ಟುವಾಗ ಗಂಡಾಗಿ ಬೆಳೆಯುತ್ತಾ ಹೆಣ್ಣಾಗಿ ಬದಲಾಗುವ ನೂರಾರು ಜನರು ತಮ್ಮ ಭಾವನೆಯನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ್ದಾಗಿದೆ. ಮನೆ ಬಿಟ್ಟು ಸಮುದಾಯದೊಳಗೆ ತೃತೀಯ ಲಿಂಗಿ ಎಂದು ಗುರುತಿಸಿಕೊಂಡವರಿಗೆ ಸಮಾಜ ಬದುಕಲು ಬಿಡುತ್ತಿಲ್ಲ. ನಾವು ಗೌರವದಿಂದ ಬದುಕಲು ಚಿಕ್ಕ ಅವಕಾಶ ನೀಡುತ್ತಿಲ್ಲ. ಪರಿಣಾಮ ಅನಿವಾರ್ಯವಾಗಿ ಭಿಕ್ಷಾಟನೆ, ಲೈಂಗಿಕ ವೃತ್ತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಅದೆಷ್ಟೋ ಮಂದಿ ಸಮಾಜದ ಮುಖ್ಯ ವಾಹಿನಿಗೆ ಬಾರದೆ ಜೀವನವನ್ನು ಕತ್ತಲಲ್ಲಿ ಕಳೆಯುತ್ತಿದ್ದಾರೆ. ಅಂತಹವರಿಗೆ ನಮ್ಮ ಆಸರೆ ಸಂಸ್ಥೆ ಅವರಿಗೆ ಸಹಾಯ ಮಾಡುವ ಪ್ರಯತ್ನ ಮಾಡುತ್ತದೆ ಎನ್ನುತ್ತಾರೆ ಸಂಜೀವ ಸುವರ್ಣ.