ಮುಂಬೈ, ನ 29 (MSP): ವಿವಾದಾತ್ಮಕ ಹೇಳಿಕೆಗಳಿಂದ ಕಾಂಟ್ರವರ್ಸಿ ಕ್ವೀನ್ ಎಂದೇ ಖ್ಯಾತಿಗೆ ಒಳಗಾಗಿದ್ದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಚಿತ್ರ ರಸಿಕರಿಗೆ ಶಾಕ್ ನೀಡಿದ್ದಾರೆ. ಆದ್ರೆ ಈ ಬಾರಿ ವಿವಾದಾತ್ಮಕ ಹೇಳಿಕೆಯಿಂದಲ್ಲ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಹೊಸ ಕಿಚ್ಚು ಹತ್ತಿಸಿದ್ದಾರೆ.
ಡಿಸೆಂಬರ್ 31, 2018ರಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂಡಿಯಸ್ ಗಾಟ್ ಟ್ಯಾಲೆಂಟ್ ಸ್ವರ್ಧಿ ದೀಪಾಕ್ ಕಲಾಲ್ ಜತೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ. ಇನ್ನು ದೀಪಕ್ ಯಾರೆಂದು ಗಮನಿಸುವುದಾದರೆ ಕಾಶ್ಮೀರದಲ್ಲಿ ದೀಪಕ್ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಟಾರ್ ಆದವರು. ಪುಣೆ ಮೂಲದ ಇವರು ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಸಂಪಾದಿಸಿದ್ದಾರೆ. ತನ್ನದೇ ಆದಂತಹ ಮಾತಿನ ಶೈಲಿ ಮೂಲಕ ಮಾತಿನ ಮಲ್ಲ ಎಂದು ಖ್ಯಾತಿಗಳಿಸಿಕೊಂಡಿದ್ದಾರೆ.
ಮದುವೆ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿರುವ ರಾಖಿ, ದೀಪಕ್ ಸ್ಪರ್ಧೆ ವೇಳೆ ತನಗೆ ಪ್ರಪೋಸ್ ಮಾಡಿದ್ರು, ಅದಕ್ಕೆ ನಾನು ಒಪ್ಪಿಗೆ ನೀಡಿದ್ದೆ. ಇತ್ತೀಚೆಗೆ ಬಾಲಿವುಡ್ನಲ್ಲಿ ಎಲ್ಲರೂ ಮದುವೆ ಆಗ್ತಿದ್ದಾರೆ, ಹೀಗಾಗಿ ನನಗೂ ವಿವಾಹವಾಗಲೂ ಇದು ಸೂಕ್ತ ಸಂದರ್ಭ ಎಂದೆಣಿಸಿತು. ಹೀಗಾಗಿ ನಾನು ದೀಪಕ್ ಜೊತೆ ಮದುವೆ ಆಗಲು ನಿರ್ಧರಿಸಿದ್ದೇನೆ ಎಂದು ಸಾವಂತ್ ಹೇಳಿದ್ದಾರೆ. ರಾಖಿ ಪೋಸ್ಟ್ ಮಾಡಿರುವ ಆಮಂತ್ರಣದಲ್ಲಿರುವಂತೆ ಡಿಸೆಂಬರ್ 31ರಂದು ಸಂಜೆ 5.55ಕ್ಕೆ ಲಾಸ್ ಏಂಜಲೀಸ್ನಲ್ಲಿ ಮದುವೆ ನಡೆಯಲಿದೆಯಂತೆ.
ಇನ್ನು ಖುದ್ದು ರಾಖಿ ಸಾವಂತ್ ಅವರೇ ಮದುವೆ ವಿಷಯ ತಿಳಿಸಿರುವ ಕಾರಣ ಈ ವಿಚಾರ ನಂಬಬಹುದೇನೋ? ಆದರೂ ರಾಖಿ ಮನಸ್ಸು ಯಾವಾಗ ಬೇಕಾದರೂ ಬದಲಾಗಬಹುದು ಎನ್ನುವುದನ್ನು ಮರೆಯುವಂತಿಲ್ಲ ಎನ್ನುತ್ತಾರೆ ನೆಟ್ಟಿಗರು..!