ಮಂಗಳೂರು, ನ 29 (MSP): ಅಡ್ಯಾರ್ ನ ಅರಫಾದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮರಳು ದಕ್ಕೆಗೆ ನ.28 ರ ಬುಧವಾರ ರಾತ್ರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರದಂದು ರಾತ್ರೋ ರಾತ್ರಿ ಕಂಕನಾಡಿ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದ ಭೂ ಗಣಿ ಅಧಿಕಾರಿಗಳು ನದಿಯಲ್ಲಿದ್ದ 17 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ಸಂದರ್ಭ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಆರೋಪಿಗಳು ನದಿಗೆ ಜಿಗಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ರಾತ್ರಿಯೇ ನದಿಯಿಂದ ದೋಣಿ ಮೇಲೆತ್ತಲಾಗದ ಕಾರಣ ಬೆಳಗ್ಗಿನ ಜಾವದವರೆಗೂ ಸ್ಥಳದಲ್ಲೇ ವಾಸ್ತವ್ಯ ಹೂಡಿದ ಅಧಿಕಾರಿಗಳು ಮುಂಜಾನೆ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಎಲ್ಲಾ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ನಿರಂಜನ್, ಆರ್ ಕೆ ಮೂರ್ತಿ ಸುದರ್ಶನ್ ಭಾಗಿಯಾಗಿದ್ದರು. ಇನ್ನು ಅರಫಾದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಇತ್ತೀಚೆಗಷ್ಟೇ ದಾಯ್ಜಿವರ್ಲ್ಡ್ ವಾಹಿನಿ ವಿಸ್ತೃತ ವರದಿ ಬಿತ್ತರಿಸಿತ್ತು.