ಕುಂದಾಪುರ, ನ 29(SM): ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದ ಮಾರಣಾಂತಕ ಹಲ್ಲೆ ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಜ್ಯೂನಿಯರ್ ಕಾಲೇಜು ಬಳಿ ನಡೆದಿದೆ.
ಕುಂದಾಪುರದ ಜ್ಯೂನಿಯರ್ ಕಾಲೇಜಿನ ಗೇಟ್ ಬಳಿ ಗುರುವಾರ ಬೆಳಿಗ್ಗೆ ಹೊಂಚು ಹಾಕಿ ನಡೆಸಲಾದ ಚೂರಿ ಇರಿತ ಪ್ರಕರಣದಲ್ಲಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಅನೂಪ್ ಶೇರಿಗಾರ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಕೋಟೇಶ್ವರ ನಿವಾಸಿ ಯಮ ಯಾನೇ ಮಿಥುನ್ ಎಂಬಾತ ಚೂರಿ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಅನೂಪ್ ಶೇರಿಗಾರ್ ಹಾಗೂ ಅದೇ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪವನ್ ಮತ್ತು ತಂಡಕ್ಕೆ ಕೆಲ ತಿಂಗಳ ಹಿಂದೆ ಗಲಾಟೆಯಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಕಾರಣಕ್ಕೆ ಪವನ್ ಹಾಗೂ ಆತನ ಬೆಂಬಲಿಗರು ಅನೂಪ್ಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಅನೂಪ್ನನ್ನು ಮುಗಿಸುವಂತೆ ಪವನ್ ಆತನ ಸ್ನೇಹಿತ ವಿಥುನ್ಗೆ ತಿಳಿಸಿದ್ದು, ಆರೋಪಿ ವಿಥುನ್ ಕಳೆದ ಎರಡು ದಿನಗಳಿಂದ ಅನೂಪ್ ಗೆ ಹಲ್ಲೆ ನಡೆಸಲು ಹೊಂಚುಹಾಕುತ್ತಿದ್ದ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಅನೂಪ್ ಹಾಗೂ ಅವನ ಸ್ನೇಹಿತ ಕಾಲೇಜಿಗೆ ಬರುತ್ತಿದ್ದ ವೇಳೆ ಆರೋಪಿ ವಿಥುನ್ ಚಾಕುವಿನಿಂದ ಎದೆ, ಕುತ್ತಿಗೆ, ಹೊಟ್ಟೆಗೆ ಮಾರಂಣಾತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.