ಬೆಂಗಳೂರು, ನ 29(SM): ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ 2 ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖುಲಾಸೆಗೊಂಡಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ಬಿಎಸ್ ವೈ ವಿರುದ್ಧ ದಾಖಲಾಗಿತ್ತು.
ಗುರುವಾರ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರನ್ನು ಖುಲಾಸೆಗೊಳಿಸಿದೆ. ಸಾಕ್ಷ್ಯಧಾರಗಳ ಕೊರತೆ ಹಿನ್ನಲೆಯಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯೂರ್ತಿ ಬಿ.ವಿ. ಪಾಟೀಲ್ ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಐಪಿಸಿ ಸೆಕ್ಷನ್ 171 ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಗುರುವಾರದಂದು ನ್ಯಾಯಾಲಯಕ್ಕೆ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಿದ್ದರು. ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಹಣ ನೀಡಿದ ಪ್ರಕರಣ, ಬಿಜೆಪಿಗೆ ಮತ ನೀಡುವಂತೆ ಪ್ರಮಾಣ ಮಾಡಿಸಿಕೊಂಡಿದ್ದ ಆರೋಪದ ಮೇಲೆ ಯಡಿಯೂರಪ್ಪ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ನ್ಯಾಯಮೂರ್ತಿ ಬಿ.ವಿ.ಪಾಟೀಲ್ ಅವರು ಸಾಕ್ಷ್ಯಧಾರಗಳ ಕೊರತೆ ಹಿನ್ನಲೆಯಲ್ಲಿ ಎರಡು ಪ್ರಕರಣಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.