ಬಾಗಲಕೋಟೆ, ನ 30 (MSP): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಿಂದ ತಂದಿದ್ದ ಮಂತ್ರಾಕ್ಷತೆ, ನಿರ್ಮಾಲ್ಯಗಳು ಸಾಲಿಗ್ರಾಮವಾಗಿ ಪರಿವರ್ತನೆಗೊಂಡ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದ್ದು, ಇದು ರಾಘವೇಂದ್ರ ಸ್ವಾಮಿಯ ಪವಾಡ ಎಂದು ಭಕ್ತರು ಹೇಳುತ್ತಿದ್ದಾರೆ.
ಬಾಗಲಕೋಟೆಯ ಪ್ರಹ್ಲಾದ ಸೀಮಿಕೇರಿ ಅವರ ಮನೆಯಲ್ಲಿ ಈ ಪವಾಡ ನಡೆದಿದೆ ಎನ್ನಲಾಗಿದ್ದು, ಅವರು ಆರು ತಿಂಗಳ ಹಿಂದೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಆಶೀರ್ವಾದ ರೂಪದಲ್ಲಿ ಮಂತ್ರಾಕ್ಷತೆ ಪ್ರಸಾದವನ್ನು ತಂದು ಮನೆಯಲ್ಲಿಟ್ಟಿದ್ದರು. ಆದರೆ ಕಳೆದ ಹದಿನೈದು ದಿನಗಳ ಹಿಂದೆ ನೋಡಿದಾಗ ಇವುಗಳು 10 ಸಾಲಿಗ್ರಾಮವಾಗಿ ಪರಿವರ್ತನೆಯಾಗಿರುವುದನ್ನು ಕಂಡು ಅಚ್ಚರಿಗೆ ಒಳಗಾದೆವು ಎಂದು ಮನೆಯವರು ತಿಳಿಸಿದ್ದಾರೆ.
ಆದರೆ ಇದು ಸಾಲಿಗ್ರಾಮವೋ ಅಥವಾ ಇಲ್ಲವೋ ಎಂದು ಅನುಮಾನಗೊಂಡ ಪ್ರಹ್ಲಾದ ಅವರು ಅದನ್ನು ಖಚಿತ ಪಡಿಸಿಕೊಳ್ಳಲು ಮಂತ್ರಾಲಯಕ್ಕೆ ತೆರಳಿದ್ದರು. ಆಗ ರಾಘವೇಂದ್ರ ಮಠದ ಶ್ರೀಗಳಾದ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ಅದು ಸಾಲಿಗ್ರಾಮ ಎಂದು ಖಚಿತ ಪಡಿಸಿದರು ಎಂದು ಹೇಳಿದ್ದಾರೆ. ಹತ್ತು ಸಾಲಿಗ್ರಾಮದಲ್ಲಿ ಐದು ಸಾಲಿಗ್ರಾಮಗಳನ್ನು ಶ್ರೀಮಠದಲ್ಲಿ ನಿತ್ಯ ಪೂಜೆಗಾಗಿ ಸೀಮಿಕೇರಿ ಕುಟುಂಬದವರು ವಿಧಿವಿಧಾನಗಳ ಮೂಲಕ ಸಮರ್ಪಣೆ ಮಾಡಿದ್ದು, ಉಳಿದ ಐದು ಸಾಲಿಗ್ರಾಮವನ್ನು ಮನೆಗೆ ವಾಪಾಸ್ ತಂದಿದ್ದಾರೆ. ಇದೀಗ ಪ್ರಹ್ಲಾದ ಮನೆಗೆ ಸಾಲಿಗ್ರಾಮ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಹರಿದುಬರುತ್ತಿದೆ.