ನವದೆಹಲಿ ನ 30 (MSP): ಸಾಲಮನ್ನಾ ಸೇರಿ ಹಲವು ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಬಂದಿರುವ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎರಡನೇ ದಿನವಾದ ಶುಕ್ರವಾರವು ಪ್ರತಿಭಟನೆ ನಡೆಸುತ್ತಿದ್ದು, ಇಂದು ಸಂಸತ್ತಿನ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದೆ.
ರಾಮ್ ಲೀಲಾ ಮೈದಾನ ಸೇರಿದ್ದ ಹಲವೆಡೆಯಿಂದ ಬಂದ ರೈತ ಸಮುದಾಯವೂ ಒಕ್ಕೂರಲಿನಿಂದ ನಮಗೆ ಅಯೋಧ್ಯೆ ಬೇಡ, ಸಾಲ ಮನ್ನಾ ಬೇಕು ಎಂಬ ಘೋಷಣೆಗಳನ್ನು ಕೂಗಿ ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಆತ್ಮಹತ್ಯೆಗ ಶರಣಾದ ಇಬ್ಬರು ರೈತರ ತಲೆಬುರುಡೆ ಹಾಗೂ ದಿಕ್ಕಾರದ ಘೋಷಣದ ಫಲಕಗಳನ್ನು ಹಿಡಿದ ರೈತರು, ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ, ಖರೀದಿ ಕೇಂದ್ರ ಸ್ಥಾಪನೆ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ರೈತರ ಸಾಲ ಮನ್ನಾ,ಮಿನಾಥನ್ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಚರ್ಚಿಸಲೆಂದೇ 21 ದಿನಗಳ ಸಂಸತ್ ಅಧಿವೇಶನ ಕರೆಯಬೇಕು ಎನ್ನುವುದು ರೈತರ ಪ್ರಮುಖ ಬೇಡಿಕೆಯಲ್ಲಿ ಒಂದಾಗಿದೆ.
ಪ್ರತಿಭಟನೆ ಎರಡನೇ ದಿನವಾದ ಇಂದು ಸಂಸತ್ ರ್ಯಾಲಿಗೆ ಅವಕಾಶ ನೀಡದಿದ್ದಲ್ಲಿ ನಗ್ನರಾಗಿ ಮೆರವಣಿಗೆ ಮಾಡುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ. ಈಗಾಗಲೇ ರಾಮ್ ಲೀಲಾ ಮೈದಾನದಿಂದ ಸಾವಿರಾರು ರೈತರು ಸಂಸತ್ ನತ್ತ ಹೆಜ್ಜೆ ಹಾಕಿದ್ದು, ಭದ್ರತೆಗಾಗಿ 3,500 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಪ್ರತಿಭಟನೆಗೆ ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ದೆಹಲಿಗೆ ರೈತರು ಆಗಮಿಸಿದ್ದಾರೆ.