ಮಂಗಳೂರು, ನ 30 (MSP): ತೋಟ ಬೆಂಗ್ರೆಯಲ್ಲಿ ನ.18 ರಂದು ವಿಹಾರಕ್ಕೆಂದು ಬಂದಿದ್ದ ಜೋಡಿಯನ್ನು ತಡೆದು ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನ.30 ರ ಶುಕ್ರವಾರ ನಗರದ ಎಸ್.ಡಿ.ಎಮ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರಕರಣ ತಡವಾಗಿ ಬೆಳಕಿಗೆ ಬಂದರೂ, ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಗ್ಯಾಂಗ್ ರೇಪ್ ಘಟನೆಯಿಂದ ಸಾರ್ವಜನಿಕರು ಮುಕ್ತವಾಗಿ ಓಡಾಡಲು ಹಿಂದೇಟು ಹಾಕುವಂತಾಗಿದೆ.
ತೋಟ ಬೆಂಗ್ರೆ ಪ್ರವಾಸಿ ತಾಣವಾಗಿರುವ ಈ ಪ್ರದೇಶವು ರೌಡಿಗಳ, ಮಾದಕ ವ್ಯಸನಿಗಳ ಅಡ್ದೆಯಾಗಿ ಪರಿವರ್ತನೆಯಾಗಿದೆ.ಈ ಘಟನೆಯಿಂದ ಕರಾವಳಿಯೇ ಪ್ರದೇಶವೇ ತಲೆತಗ್ಗಿಸುವಂತಾಗಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ತೋಟ ಬೆಂಗ್ರೆ ಪ್ರದೇಶದಲ್ಲಿ ಪ್ರವಾಸಿಗಳಿಗೆ ತೊಂದರೆಯಾಗದಂತೆ ವಿಶೇಷ ಪೊಲೀಸ್ ಭದ್ರತೆ ಒದಗಿಸಬೇಕು. ಗಾಂಜಾ, ಅಫೀಮಿನಂತಹ ಮಾದಕ ಜಾಲದ ವಿರುದ್ದ ಕ್ರಮ ಕೈಗೊಳ್ಳಬೇಕು, ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿ ಆಳವಡಿಸಬೇಕು ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಬಳಿಕ ವಿದ್ಯಾರ್ಥಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ, ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.