ಉಡುಪಿ, ನ 30 (MSP): ವಿಷ್ಣುವರ್ಧನ್ ಸ್ಮಾರಕದ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದರೂ ಒಂದು ವಿವಾದ ಆಗ್ತಿದೆ. ಯಾಕೆ ಹೀಗಾಗ್ತಿದೆ ಗೊತ್ತಾಗುತ್ತಿಲ್ಲ. ನಾವೆಲ್ಲರೂ ಭಾರತಿ ಅವರ ಪರ ನಿಲ್ಲುತ್ತೇವೆ. ಅವರ ನೋವು ನಮಗೆ ಅರ್ಥ ಆಗುತ್ತೆ. ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ ಕಳೆದರೂ ಸ್ಮಾರಕ ಆಗದಿರುವ ಬಗ್ಗೆ ನಮಗೂ ನೋವು ಇದೆ ಎಂದುಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ಉಡುಪಿಯಲ್ಲಿಂದು ನ.30ರ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಅಂದ್ರೆ ವಿಷ್ಣುವರ್ಧನ್ ಗೆ ಪ್ರಾಣ. ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ನಮಗಿಂತ ಚೆನ್ನಾಗಿ ತಿಳಿದಿರುತ್ತೆ. ಹೀಗಾಗಿ ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳುತ್ತಿದ್ದಾರೆ. ಸ್ಮಾರಕ ನಿರ್ಮಾಣ ವಿಚಾರದಲ್ಲಿ ಭಾರತಿ ಅವರ ಬೇಸರ ಸಹಜ. ಹೀಗಾಗಿ ಕುಟುಂಬದ ಮಾತಿಗೆ ಬೆಲೆ ಕೊಡಬೇಕಾಗುತ್ತದೆ ಎಂದರು.
ಇದಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಸಿನೆಮಾ ರಂಗದವರು. ಆದುದರಿಂದ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಭಾರತಿಯವರ ಜಾಗದಲ್ಲಿ ಭೂಮಿಗೆ ಸಂಬಂದಪಟ್ಟ ಸಣ್ಣ ತಕರಾರು ಇದೆ. ನಿನ್ನೆ ಮುನಿರತ್ನ, ಮಂಜು ಸಂಧಾನ, ಮಾತುಕತೆ ಮಾಡಿದ್ದಾರೆ. ಅವರು ಅವರ ಅಭಿಪ್ರಾಯಗಳನ್ನು ಪತ್ರದ ಮೂಲಕ ಭಾರತಿ ಅವರಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಂಬರೀಷ್ ಸ್ಮಾರಕ ಖಚಿತ: ಅಂಬರೀಷ್ ಒಬ್ಬ ಮಹಾನ್ ನಾಯಕ. ನಿಜವಾದ ನಾಯಕ, ಜನರ ಹೃದಯದಲ್ಲಿ ವಾಸ ಮಾಡಿದ ನಟ. ಅಂಬರೀಷ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ. ಸ್ಮಾರಕ ಕಂಠೀರವದಲ್ಲಿಯೇ ಆಗುತ್ತದೆ ಎಂದು ತಿಳಿಸಿದರು
ರಮ್ಯ ಗೈರು ಬಗ್ಗೆ : ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ, ನಟಿ ರಮ್ಯಾ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವರು, ಅವರಿಗೆ ಹುಷಾರಿಲ್ಲ ಅಂತ ಹೇಳ್ಕೊಂಡಿದ್ದಾರೆ ಅಲ್ವಾ. ಇದರಲ್ಲಿ ಬೇರೆ ಯಾವುದೇ ರಾಜಕೀಯ ಕಾರಣ ಇರಲಿಕ್ಕಿಲ್ಲ. ಹೆಣ್ಣು ಮಕ್ಕಳಿಗೆ ಹಲವಾರು ತೊಂದರೆಗಳಿರುತ್ತದೆ. ಮುಂದೆ ಅವರು ಅಂಬರೀಶ್ ಅವರ ವೈಕುಂಠ ಸಮಾರಾಧನೆಗದಾರೂ ಬರಬಹುದು ಎಂದರು.
ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈಗೆ ತೆರಳಿರುವ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೋಗೋರು ಹೋಗ್ತಾ ಇರುತ್ತಾರೆ. ಸರಕಾರ ಭದ್ರವಾಗಿರುತ್ತದೆ. ಅದೆಲ್ಲ ಬರೀ ಸುಳ್ಳು ಎಂದು ತಿಳಿಸಿದರು.
ಟೋಲ್ ಸಮಸ್ಯೆ: ಕೇಂದ್ರಕ್ಕೆ ನಿಯೋಗ
ಜಿಲ್ಲೆಯ ಟೋಲ್ಗೇಟ್ ಸಮಸ್ಯೆಗೆ ಸಂಬಂಧಿಸಿ, ಟೋಲ್ಗೇಟ್ಗೆ ಸಂಬಂಧಿಸಿದಂತೆ ನಾವು ಮಾತನಾಡಿದರೆ ಹಕ್ಕುಚ್ಯುತಿ ಆಗುತ್ತದೆ. ಟೋಲ್ಗೇಟ್ ಸಮಸ್ಯೆಗೆ ನಾನು ಕ್ರಮ ತೆಗೆದುಕೊಳ್ಳುವಂತಿಲ್ಲ. ಇದಕ್ಕಾಗಿ ರಾಜ್ಯ ಲೋಕೋಪಯೋಗಿ ಸಚಿವರು ಸೇರಿದ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಚಿವ ಗಡ್ಕರಿ ಅವರನ್ನು ಮನವಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಸರ್ವಿಸ್ ರಸ್ತೆ ಪೂರ್ಣಗೊಳಿಸುವವರೆಗೆ ಸ್ಥಳೀಯ ವಾಹನಗಳಿಗೆ ಟೋಲ್ನಿಂದ ರಿಯಾಯಿತಿ ನೀಡುವಂತೆ ಸಚಿವರಿಗೆ ಮನವಿ ಮಾಡಲಾಗುವುದೆಂದು ಸಚಿವೆ ಜಯಮಾಲಾ ತಿಳಿಸಿದರು. ನವಯುಗ ಕಂಪನಿ ಮಾರ್ಚ್ ಒಳಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವುದಾಗಿ ತಿಳಿಸಿದೆ. ಇನ್ನುಳಿದ ವಿಚಾರಗಳಿಗೆ ಗಡ್ಕರಿ ಅವರೇ ಉತ್ತರ ಕೊಡಬೇಕು ಎಂದು ತಿಳಿಸಿದ್ದಾರೆ.