ಮಂಗಳೂರು, ಡಿ 01(SM): ಪತಿಗೆ ಜೀವ ಬೆದರಿಕೆ ಕರೆ ಮಾಡಿ ಬರೋಬ್ಬರಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಮಣಿಪಾಲ ಅನಂತನಗರದ ನಿವಾಸಿ ಅಂಬಿಕಾ ನಾಯಕ್ ಯಾನೆ ಅಂಬಿಕಾ ಪ್ರಭು ಹಾಗೂ ಆಕೆಯ ಸ್ನೇಹಿತ ಮಂಜುನಾಥ್ ಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಕಾ ತಂದೆ ಕೆ. ವಾಸುದೇವ ಪ್ರಭುವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳಾಗಿರುವ ಅಂಬಿಕಾ ನಾಯಕ್ ಹಾಗೂ ಈಕೆಯ ಸ್ನೇಹಿತ ಮಂಡ್ಯ ಜಿಲ್ಲೆಯ ಬಿ. ಮಂಜುನಾಥ್ ತಲೆಮರೆಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಉಳ್ಳಾಲ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಅಂಬಿಕಾ ನಾಯಕ್ ವಿದೇಶದಲ್ಲಿರುವ ತನ್ನ ಪತಿ ಗಣೇಶ್ ನಾಯಕ್ಗೆ ಮಂಜುನಾಥ ಮೂಲಕ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡಿದ್ದ ಗಣೇಶ್ ೫೦ ಲಕ್ಷ ರೂಪಾಯಿ ಕಳುಹಿಸಿಕೊಟ್ಟಿದ್ದಾನೆ. ಹೀಗಿದ್ದರೂ ಪತ್ನಿ ಅಂಬಿಕಾ ಮತ್ತೆ ಮತ್ತೆ ವಿದೇಶಕ್ಕೆ ಕರೆ ಮಾಡಿಸಿ ಇನ್ನೂ ೫೦ ಲಕ್ಷ ಹಣಕ್ಕೆ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಗಣೇಶ್ ನಾಯಕ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದ.
ಕಾರ್ಯಾಚರಣೆ ನಡೆಸಿದ ಪೊಲೀಸರು ತನಿಖೆ ನಡೆಸಿದಾಗ ಈ ಕೃತ್ಯಕ್ಕೆ ಅಂಬಿಕಾ ತಂದೆ ವಾಸುದೇವ ಪ್ರಭು ಕುಮ್ಮಕ್ಕು ನೀಡಿರುವುದು ಖಚಿತಪಟ್ಟಿದ್ದು, ಅವರನ್ನು ಬಂಧಿಸಲಾಗಿದೆ.