ಮಂಗಳೂರಿನ, ಡಿ 01(SM): ತೋಟಬೆಂಗರೆಯಲ್ಲಿ ನಡೆದಿದ್ದ ಅತ್ಯಾಚಾರದಂತಹ ಪ್ರಕರಣದಿಂದ ಪ್ರವಾಸಿ ತಾಣವಾದ ಮಂಗಳೂರಿನಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜಘಾತುಕ ಶಕ್ತಿಗಳಿಗೆ ಏನೂ ಮಾಡಿದರೂ ಆಗುತ್ತದೆ ಎಂಬ ಭಾವನೆ ಇರುವುದು ದುರಂತವಾಗಿದೆ ಎಂದರು.
ಜನವಸತಿಯಿರುವ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಆಗಿರುವುದು ಆತಂಕಕಾರಿ ವಿಷಯವಾಗಿದೆ. ಸಂತ್ರಸ್ತೆಗೆ ಪರಿಹಾರ ನೀಡುವಂತಹ ಕೆಲಸವಾಗಬೇಕಿದೆ ಹಾಗೂ ಪ್ರಕರಣದಲ್ಲಿ ಈಗಾಗಲೇ ನಿರ್ಲಕ್ಷ್ಯ ವಹಿಸಿದ ಎಎಸ್ಐಯನ್ನು ಅಮಾನತುಗೊಳಿಸಲಾಗಿದೆ. ಇಂತಹ ನಿರ್ಲಕ್ಷ್ಯಕ್ಕೆ ಅಮಾನತು ಶಿಕ್ಷೆ ಸಾಲದು ಅಂತಹವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂತ್ರಸ್ತೆ ಪ್ರಕರಣ ದಾಖಲಿಸಲು ಹೋದ ಸಂದರ್ಭದಲ್ಲಿ ಇದ್ದ ಇನ್ನೋರ್ವ ಪೊಲೀಸ್ ಪೇದೆಯ ವಿಚಾರಣೆ ಯಾಕೆ ನಡೆದಿಲ್ಲ. ಅವರನ್ನು ವಿಚಾರಣೆ ನಡೆಸಿ ವಜಾಗೊಳಿಸಬೇಕು. ಇಂತಹ ನಿರ್ಲಕ್ಷ್ಯಕ್ಕೆ ಅಮಾನತು ಮಾಡುವ ಬದಲು ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನು ಇದೇ ಸಂದರ್ಭ ಅವರು ಮಂಗಳೂರು ಏರ್ ಪೋರ್ಟ್ ಖಾಸಗೀಕರಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ವಿಮಾನ ನಿಲ್ದಾಣ ಖಾಸಗೀಕರಣದಿಂದಾಗಿ ಆರ್ಥಿಕ ಲಾಭವಾಗುವುದಾದರೆ ಮಾಡಲಿ. ಆದರೆ ಇದರಿಂದ ಯಾರೋ ಒಬ್ಬರಿಗೆ ಲಾಭವಾಗುವುದಾದರೆ ಖಾಸಗೀಕರಣ ನಡೆಸುವುದು ಬೇಡ ಎಂದರು.