ಬೆಳ್ತಂಗಡಿ,ಡಿ 02 (MSP): ಜಮೀನೊಂದರಲ್ಲಿ ಮರಕಡಿಯುವ ವೇಳೆ ಸ್ಥಳೀಯರೊಬ್ಬರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಹೂತು ಹಾಕಿದ್ದಾರೆ ಎಂಬ ದೂರಿನ ವಿಚಾರವು ಬೆಳ್ತಂಗಡಿ ಪರಿಸರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.ಉಜಿರೆ ಗ್ರಾಮದ ಬಿಲ್ಲರೋಡಿ ಪರಿಸರದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ಸಂಘಟನೆಯೊಂದರ ಮುಖಂಡ ಹಾಗೂ ಅವರ ಬೆಂಬಲಿಗರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ನಾಗರಿಕರ ಹೆಸರಿನಲ್ಲಿ ಪೋಲಿಸರು ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ದೂರಿನಲ್ಲಿ ತಿಳಿಸಿರುವಂತೆ ಸ್ಥಳೀಯ ವ್ಯಕ್ತಿಯೊಬ್ಬರ ನಾಪತ್ತೆ ಕುರಿತು ನಮಗೆ ದೂರು ಬಂದಿಲ್ಲ ಎಂದು ಪೋಲಿಸರು ತಿಳಿಸುತ್ತಿದ್ದಾರೆ.
ದೂರನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ನೀಡಲಾಗಿದ್ದು ಅದರ ಪ್ರತಿಯನ್ನು ರಾಜ್ಯ ಮಹಾ ಪೋಲಿಸ್ ನಿರ್ದೇಶಕರು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಉಪ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ತಹಸೀಲ್ದಾರ್ಗೆ ಕಳುಹಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಯಾವುದೇ ಹೆಸರಿಲ್ಲದ ಅರ್ಜಿಯೊಂದು ಸಿಕ್ಕಿದೆ ಆದರೆ ಅದರ ಕುರಿತು ದೂರು ನೀಡಿಲ್ಲ. ಹೀಗಾಗಿ ತನಿಖೆ ನಡೆಸಿದ ಬಳಿಕವೇ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಿದೆ ಎಂದು ಪೋಲಿಸರು ಹೇಳುತ್ತಾರೆ.
ಅರಣ್ಯ ಇಲಾಖೆಗೆ ಬಂದಿರುವ ಅಕ್ರಮ ಮರದ ದಾಸ್ತಾನಿಗೆ ಸಂಬಂಧಿಸಿದ ದೂರಿನ ಹಿನ್ನಲೆಯಲ್ಲಿ ಇಲಾಖೆಯ ತಂಡ ಶುಕ್ರವಾರ ಉಜಿರೆಗೆ ತೆರಳಿ ತನಿಖೆ ನಡೆಸಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಮರಕಡಿಯುವದಕ್ಕೆ ಪರವಾನಗಿ ಪಡೆದಿದ್ದು ಅದಕ್ಕೂ ದಾಸ್ತಾನಿರುವ ಮರಮಟ್ಟುಗಳಿಗೂ ಹೊಂದಾಣಿಕೆ ಬರುತ್ತದೆಯೇ ಎಂದು ಪರಿಶೀಲಿಸಿದ್ದೇವೆ. ಹೆಚ್ಚುವರಿಯಾಗಿ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಮರಮಟ್ಟು ದಾಸ್ತಾನಿಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಭಾಸ್ಕರರಾವ್ ವಿರುದ್ಧ ಬೆಳ್ತಂಗಡಿ ಅರಣ್ಯಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಾಧಿಕಾರಿಗಳ ತಂಡಕ್ಕೆ ಪರಿಶೀಲನೆಯ ಸಂದರ್ಭ ಮಹೇಶ್ ಶೆಟ್ಟಿ ಮನೆಯಲ್ಲಿಒಟ್ಟು 4.90 ಲಕ್ಷರೂ. ಮೌಲ್ಯದ 600 ಸಿಎಫ್ಟಿ ಮರದ ತುಂಡುಗಳು ಪತ್ತೆಯಾಗಿದೆ. ಮರಗಳನ್ನು ಮುಟ್ಟುಗೋಲು ಹಾಕಲಾಗಿದ್ದು ವಶಪಡಿಸಿಕೊಂಡು ಮರದ ಮೌಲ್ಯದ ಶೇ. 50ರಷ್ಟು ದಂಡವನ್ನೂ ಕಟ್ಟಬೇಕಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.