ಕಡಬ, ಡಿ 02 (MSP): ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆಗಡ್ಡವಾಗಿ ಪಲ್ಟಿಯಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ಬಳಿಯ ತೂಗುಸೇತುವೆಯ ತಿರುವಿನಲ್ಲಿ ಡಿ.1 ರ ಶನಿವಾರ ರಾತ್ರಿ ಸಂಭವಿಸಿದ್ದು, ಸ್ಥಳಕ್ಕೆ ತಜ್ಞ ಅಧಿಕಾರಿಗಳ ತಂಡ ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಘಟನೆಯಿಂದ ರಸ್ತೆ ತಡೆ ಉಂಟಾಗಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಭಾರತ್ ಗ್ಯಾಸ್ ಸಂಸ್ಥೆಗೆ ಸೇರಿದ ಟ್ಯಾಂಕರ್ ಪಲ್ಟಿಯಾಗಿದ್ದು, ಟ್ಯಾಂಕರ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆದ್ರೋಡಿ ಆಸುಪಾಸಿನ ಮತ್ತು ಮೊಗೇರಡ್ಕ ನದಿ ಕಿನಾರೆಯಲ್ಲಿ ವಾಸಿಸುವ ಮನೆಗಳಲ್ಲಿ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಡಿ.02 ರ ಮದ್ಯಾಹ್ನದ ವೇಳೆಗೆ ಟ್ಯಾಂಕರ್ ನ್ನು ತೆರವುಗೊಳಿಸುವ ಸಾಧ್ಯತೆ ಇದೆ. ವಾಹನಗಳು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿವೆ.