ಉಡುಪಿ, ನ 02(SM): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ರವಿವಾರದಂದು ಉಡುಪಿಯಲ್ಲಿ ಜನಾಗ್ರಹ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ, ಭಾರತದಲ್ಲಿ ರಾಮ ಮಂದಿರ ನಿರ್ಮಾಣದ ಸೈಕ್ಲೋನ್ ಎದ್ದಿದೆ. ದೇವರ ವಿರುದ್ಧ ಇರುವ ಪಕ್ಷವನ್ನು ನಿರ್ನಾಮ ಮಾಡುವ ಸೈಕ್ಲೋನ್ ಇದಾಗಿದ್ದು, ರಾಮಮಂದಿರ ನಿರ್ಮಾಣವನ್ನು ಯಾರೂ ವಿರೋಧಿಸುವಂತಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಅಥವಾ ಚೀನಾದಲ್ಲಿ ರಾಮ ಮಂದಿರ ನಿರ್ಮಿಸಿ ಎಂದು ಕೇಳುತ್ತಿಲ್ಲ. ನಮ್ಮ ದೇಶದಲ್ಲಿ ರಾಮಮಂದಿರ ನಿರ್ಮಿಸಿ ಎಂದು ಕೇಳುತ್ತಿದ್ದೇವೆ. ರಾಮ ಮಂದಿರದ ಬೇಡಿಕೆ ನಾವು ಕೇಳೊ ಭಿಕ್ಷೆಯಲ್ಲ. ಪ್ರಜೆಗಳೇ ಪ್ರಭುಗಳಾಗಿ ಈ ಸಂಹಿತೆ ಮಾಡಿದ್ದಾರೆ. ರಾಮ ದೇವರಿಗೆ ತನ್ನ ಮಂದಿರ ಕಟ್ಟಿಸಿಕೊಳ್ಳುವುದು ಕಷ್ಟವಲ್ಲ. ನನಗೋಸ್ಕರ ಏನಾದ್ರೂ ಮಾಡಿ ಅಂತ ರಾಮ ದೇವರ ಆಶಯ ಎಂದರು.
ಇನ್ನು ಸಮಾವೇಶಕ್ಕೂ ಮುನ್ನ ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬಳಿಕ ಕೃಷ್ಣಮಠದ ಪಾರ್ಕಿಂಗ್ ಏರಿಯಾದಲ್ಲಿ ಸಮಾವೇಶ ನಡೆಯಿತು. ವಿಶ್ವಹಿಂದೂ ಪರಿಷತ್, ಭಜರಂಗದಳ ಆಯೋಜಿಸಿದ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ರಸ್ತೆಯುದ್ದಕ್ಕೂ ಕೇಸರಿ ಧ್ವಜ, ಬಂಟಿಂಗ್ಸ್ ರಾರಾಜಿಸುತ್ತಿತ್ತು.
ಬಾಳೆಕುದ್ರು ಮಠದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ವಿಶ್ವಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಹಲವು ಮುಖಂಡ ಸಮಾವೇಶದಲ್ಲಿ ಭಾಗವಹಿಸಿದ್ದರು.