ತಿರುವನಂತಪುರಂ, ಡಿ 03, (MSP):: ಶಬರಿಮಲೆಯಲ್ಲಿ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸುವುದನ್ನು ವಿರೋಧಿಸಿ ಡಿ. 03 ರ ಸೋಮವಾರದಂದು ಭಾರತೀಯ ಜನತಾ ಪಾರ್ಟಿ ಕೇರಳದ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್ ರಾಧಾಕೃಷ್ಣನ್ ಅವರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಲಿದ್ದಾರೆ. ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಷ್ಕರಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಚಾಲನೆ ನೀಡಲಿದ್ದಾರೆ.
ಶಬರಿಮಲೆಯಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ, ಹಾಗೂ ಶಬರಿಮಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಭಕ್ತರ ವಿರುದ್ಧ ಹಾಕಿರುವ ಸುಳ್ಳು ಕೇಸುಗಳನ್ನು ವಾಪಸ್ ಪಡೆದುಕೊಳ್ಳಬೇಕು. ಅಲ್ಲದೆ ಶಬರಿಮಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಬೇಕು, ಮುಷ್ಕರ ನಿರತರ ಮೇಲೆ ಸುಳ್ಳು ಕೇಸು ಹಾಕಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದರು. ಒಂದು ವೇಳೆ ಕೇರಳ ಸರ್ಕಾರ ಹದಿನೈದು ದಿನಗಳ ಒಳಗೆ ಬೇಡಿಕೆಗೆ ಸ್ಪಂದಿಸದೇ ಹೋದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರವಾಗಿಸುವುದಾಗಿ ಕೋರ್ ಕಮಿಟಿ ಹೇಳಿದೆ.