ಕುಂದಾಪುರ, ಡಿ 03 (MSP): ಬಾಲಕರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲ್ಪಟ್ಟ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ (40) ವಿರುದ್ದ ಭಾನುವಾರ ಮತ್ತೆ 5 ಪ್ರಕರಣಗಳು ದಾಖಲಾಗಿದೆ. ಈವರೆಗೆ ಈತನ ವಿರುದ್ದ ಒಟ್ಟು 21 ಕೇಸುಗಳು ದಾಖಲಾಗಿದ್ದು ಪ್ರಕರಣ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ.
ಶನಿವಾರದವರೆಗೆ 16 ಪ್ರಕರಣ ದಾಖಲಾಗಿದ್ದು, ರವಿವಾರ ಕುಂದಾಪುರ ಉಪ ವಿಭಾಗದ ಬೈಂದೂರಿನಲ್ಲಿ 2, ಗಂಗೊಳ್ಳಿಯಲ್ಲಿ 2, ಹಾಗೂ ಕೊಲ್ಲೂರು ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಬೈಂದೂರಿನಲ್ಲಿ 16 , ಗಂಗೊಳ್ಳಿಯಲ್ಲಿ 3, ಕುಂದಾಪುರ ಠಾಣೆಗಳಲ್ಲಿ ತಲಾ 1 ಕೇಸು ದಾಖಲಾಗಿದೆ.
ಈತನ ಪೊಲೀಸ್ ಕಸ್ಟಡಿ ಸೋಮವಾರ ಮುಗಿಯಲಿದ್ದು ಅಂದು ಆತನನ್ನು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.