ಕುಂದಾಪುರ, ಡಿ 04 (MSP): ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಅಚ್ಚರಿಯೊಂದು ನಡೆದಿದ್ದು, ಭಕ್ತರನ್ನು ಮೂಕ ವಿಸ್ಮಯರನ್ನಾಗಿಸಿದೆ. ಪ್ರಾಣಿಗಳು ದೇವ ಭಕ್ತಿ ಮೆರೆಯುತ್ತವೆ ಅನ್ನೋದು ಹಲವೆಡೆ ಸುದ್ದಿಯಾಗುತ್ತಲೇ ಇರುತ್ತದೆ. ಅಂತೆಯೇ ಶ್ರೀ ಗುಹೇಶ್ವರ ದೇವಸ್ಥಾನದ ಮುಂದೆ ಕೈ ಮುಗಿದ ಭಂಗಿಯಲ್ಲಿ ಶ್ವಾನವೊಂದು ಕೂತರೆ, ಶ್ವಾನಕ್ಕಿಂತ ತಾನು ಕಮ್ಮಿ ಎಂದು ಮುಂದೆ ಬೆಳ್ಳಕ್ಕಿಯೂ ನಿಂತು ಅಚ್ಚರಿಗೆ ಕಾರಣವಾಗಿದೆ.
ಕುಂದಾಪುರ ತಾಲೂಕಿನಲ್ಲಿರುವ ಗುಜ್ಜಾಡಿಯ ಶ್ರೀ ಗುಹೇಶ್ವರ ದೇವಸ್ಥಾನವನ್ನು ಅಗಸ್ತ್ಯ ಮುನಿ ಸ್ಥಾಪಿಸಿದ್ದು ಎನ್ನುವ ನಂಬಿಕೆ ಇಲ್ಲಿನ ಜನರದ್ದು. ದೇವಸ್ಥಾನದ ಸನಿಹದಲ್ಲೇ ಇರುವ ಕಡಬು ಕೆರೆಯಲ್ಲಿ ಸ್ನಾನ ಮಾಡಿ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಅಗಸ್ತ್ಯೇಶ್ವರ ಮುನಿ ಪೂಜೆ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಅಲ್ಲದೆ ಈ ಗುಹಾ ದೇವಸ್ಥಾನ ಕಾಶಿಗೆ ಸಂಪರ್ಕ ಕಲ್ಪಿಸುತ್ತದೆ ಎಂಬುದು ಭಕ್ತರ ನಂಬಿಕೆ.
ದೇವಸ್ಥಾನ ನಡೆದ ಸ್ವರ್ಣಾರೂಢ ಪ್ರಶ್ನೆಯ ಪ್ರಾಯಶ್ಚಿತ ಕಾರ್ಯಕ್ರಮದಲ್ಲಿ ಗಣಹೋಮ ಹಾಗೂ ಸಂಜೀವಿನಿ ಮೃತ್ಯುಂಜನ ಹೋಮ ಮತ್ತು ಮುಷ್ಟಿ ಕಾಣಿಕೆ ಸಂದರ್ಭ ಶ್ವಾನ ಗಣಪತಿ ದೇವರ ಮುಂಭಾಗ ಹೊರಗಡೆ ಹದಿನೈದು ನಿಮಿಷ ಕೈ ಮುಗಿದ ಭಂಗಿಯಲ್ಲಿ ನಿಂತಿತ್ತು. ೪ ಗಂಟೆಯ ಸಮಯ ಕೊಕ್ಕರೆ (ಬೆಳ್ಳಕ್ಕಿ) ಕಾಣಿಕೆ ಡಬ್ಬಿಯ ಹತ್ತಿರ ಮತ್ತು ಮುಷ್ಟಿ ಕಾಣಿಕೆ ಹಾಕುವ ಸ್ಥಳದಲ್ಲಿ ನಿಂತು ಗಣಪತಿ ದೇವರ ಗರ್ಭಗುಡಿ ಒಳಗಡೆ ಹೋಗಿ ತಿರುಗಾಡಿ ನಂತರ ಗುಹೆಯ ಮುಂಭಾಗ ಈಶ್ವರ ದೇವರ ಹತ್ತಿರ ನಿಂತಿರುವ ದೃಶ್ಯ ಭಕ್ತರಿಗೆಲ್ಲ ಅಚ್ಚರಿಗೆ ಕಾರಣವಾಗಿದೆ.