ಬಂಟ್ವಾಳ, ಡಿ 04 (MSP): ಮಂಗಳೂರಿನ ತೋಟಬೆಂಗ್ರೆ ಬೀಚ್ ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಸಂತ್ರಸ್ಥ ಯುವತಿಯ ದೂರು ಸ್ವೀಕರಿಸಲು ನಿರಾಕರಿಸುವ ಮೂಲಕ ಠಾಣೆಗೆ ಬಾರದಂತೆ ತಡೆಯುವ ಗುಪ್ತ ಅಜೆಂಡ ಸಾಭೀತಾಗಿದೆ ಎಂದು ಬಂಟ್ವಾಳದ ದಲಿತ ಮುಖಂಡರು ಆರೋಪಿಸಿದ್ದಾರೆ. ಸೋಮವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್ ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಬಂಟ್ವಾಳ ಪೊಲೀಸರು ಕಳ್ಳ ಕಾಕರು, ಖದೀಮರು ,ಗೂಂಡಾಗಳು ಬಂದಾಗ ಕುರ್ಚಿ ನೀಡಿ ರಾಜಮರ್ಯಾದೆ ನೀಡುತ್ತಾರೆ. ಆದರೆ ನೊಂದು ಬರುವ ದೂರುದಾರರ ದೂರು ಸ್ವೀಕರಿಸುವ ಮತ್ತು ಅಲಿಸುವ ಕನಿಷ್ಠ ಸೌಜನ್ಯವನ್ನು ತೋರುವುದಿಲ್ಲ ಎಂದು ಆರೋಪಿಸಿದರು. ಪೊಲೀಸರು ಇಂತಹ ಸಮಾಜಘಾತುಕ ಶಕ್ತಿಗಳನ್ನು ಬೆಳೆಯಲು ಬಿಟ್ಟಿರುವುದೇ ಸಾಮೂಹಿಕ ಅತ್ಯಾಚಾರದಂತ ಹೇಯ ಘಟನೆ ನಡೆಯುತ್ತಿದೆ ಎಂದ ಅವರು ಪೊಲೀಸರು ಈ ಅತ್ಯಾಚಾರ ಪ್ರಕರಣದಲ್ಲಿ ಕೇವಲ ಕೇಸು ದಾಖಲಿಸಿ,ಆರೋಪಿಗಳ ಬಂಧಿಸಿದ ಮಾತ್ರಕ್ಕೆ ಮುಗಿಯುವುದಿಲ್ಲ. ಈ ಕೃತ್ಯದ ಮೂಲವನ್ನು ಪತ್ತೆಹಚ್ಚಬೇಕು ಎಂದರು.
ಬಿ.ಸಿ.ರೋಡಿನಲ್ಲೂ ಗಾಂಜಾ: ಬಂಟ್ವಾಳ ನಗರ ಠಾಣೆಯ ಕೂಗಳತೆಯಲ್ಲಿಯೇ ಗಾಂಜಾ ಅಡ್ಡೆ ಇದ್ದರೂ ಪೊಲೀಸರು ಮೌನವಹಿಸಿದ್ದಾರೆ. ಗಾಂಜಾ ಅಡ್ಡೆಗಳ ಬಗ್ಗೆ ಪೂರ್ಣ ಮಾಹಿತಿ ಇದ್ದರೂ, ಪೊಲೀಸರು ಅತ್ತ ತಲೆಕೂಡ ಹಾಕುತ್ತಿಲ್ಲ ಎಂದು ಆರೋಪಿಸಿದ ಅವರು, ಸಂತ್ರಸ್ಥೆಯ ದೂರು ಸ್ವೀಕರಿಸದೆ ಎಎಸ್ ಐ ಅವರನ್ನು ಅಮಾನತುಗೊಳಿಸಿ,ಕೇಸು ದಾಖಲಿಸಿರುವುದು ರಾಷ್ಟ್ರಕ್ಕೆಮಾದರಿಯಾಗಿದೆ ಎಂದರು.
ಫಾಸ್ಟ್ ಟ್ರ್ಯಾಕ್ ಕೋರ್ಟ್ ನಿರ್ಮಿಸಿ: ಈ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ, ಕುಟುಂಬವನ್ನು ಕಾಪಾಡುವ ಗುರುತರ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ಸಂತ್ರಸ್ಥೆಯ ಹಿತದೃಷ್ಠಿಯಿಂದ ಪ್ರಕರಣದ ವಿಚಾರಣೆಗೆ ಬಂಟ್ವಾಳದಲ್ಲಿಯೇ ವಿಶೇಷ ಫಾಸ್ಟ್ ಟ್ರ್ಯಾಕ್ ಕೋಟ್೯ ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಭಾನುಚಂದ್ರ ಅವರು ಸಾಮೂಹಿಕ ಅತ್ಯಾಚಾರದ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಪರಿಹಾರಕ್ಕೆ ಒತ್ತಾಯ : ಕಡು ಬಡತನದಲ್ಲಿರುವ ಸಂತ್ರಸ್ಥಕುಟುಂಬಕ್ಕೆ 5 ಎಕ್ರೆ ಕೃಷಿ ಭೂಮಿ ಮಂಜೂರು ಮಾಡಬೇಕಲ್ಲದೆ ,25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೆಯೇ ಸುಸಜ್ಜಿತ ಮನೆ ನಿರ್ಮಿಸಿ ಕೊಡಬೇಕು ಎಂದರು.ಇದೇ ವೇಳೆ ಹಾಜರಿದ್ದ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರು ಮಾತನಾಡಿ.ದ.ಕ.ಜಿಲ್ಲೆಯಲ್ಲಿ ಬಿಹಾರದಂತೆ ಈಗಲೂ ದಲಿತರನ್ನು ಅಸ್ಪ್ರಶ್ಯರನ್ನಾಗಿ ಕಾಣುವ ಮನೋಭಾವ ಮುಂದುವರಿದಿದೆ.ಯುವತಿಯ ಅತ್ಯಾಚಾರ ಪ್ರಕರಣದಲ್ಲೂ ಮಾನವೀಯತೆ ಪ್ರದರ್ಶಿಸಬೇಕಾದ ವಿವಿಧ ಸಂಘಟನೆಗಳಲ್ಲಿ ಅಸ್ಪ್ರಶ್ಯತೆಯ ಸೋಂಕು ಕಂಡು ಬಂದದ್ದು ಬೇಸರ ತಂದಿದೆ ಎಂದರು. ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ನಡೆಯುತ್ತಿದ್ದರೂ ,ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಗಾಂಜಾ ವ್ಯಸನಿಗಳಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಹೇಳಿಕೆನೀಡಿರುವುದು ಸರಿಯಲ್ಲ,ಪೊಲೀಸ್ ಇಲಾಖೆಯೇ ಗಾಂಜಾ,ಡ್ರಗ್ಸ್ ಮಾಫಿಯಾದ ಜೊತೆ ಶಾಮೀಲಾಗಿರುವ ಅನುಮಾನ ಇದೆ ಎಂದರು.ದಲಿತ ಮುಖಂಡರಾದ ರಾಜ ಪಲ್ಲಮಜಲು,ಜಯ.ವಿ.ಸಂಪೋಲಿ,ರಾಜೀವ ಕಕ್ಕೆಪದವು ಉಪಸ್ಥಿತರಿದ್ದರು.