ಕುಂದಾಪುರ, ಡಿ 04 (MSP): ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಂಧಿತನಾಗಿರುವ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಯನ್ನು ಸೋಮವಾರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ದ ಒಟ್ಟು 21 ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲೇ ಅರೋಪಿಯೊಬ್ಬನ ವಿರುದ್ಧ ಇಷ್ಟು ಪ್ರಮಾಣದ ಪೋಕ್ಸೊ ಪ್ರಕರಣಗಳು ದಾಖಲಾಗಿರುವುದು ರಾಜ್ಯದಲ್ಲೇ ಮೊದಲು ಎನ್ನಲಾಗಿದೆ. ಈತನ ವಿರುದ್ದ ಪೋಕೊ ಕಾಯ್ದೆ 4,6,8 ಸೆಕ್ಷನ್ಗಳನ್ನು ಹಾಗೂ ಸಲಿಂಗ ಕಾಮದ 377 ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಈತ 2012 ರಿಂದ ಅಂದರೆ ಆರು ವರ್ಷಗಳಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪತ್ರಕರ್ತನ ಸೋಗಿನಲ್ಲಿ ಮಕ್ಕಳನ್ನು ವಿವಿಧೆಡೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದುದು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಡುಪಿ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ. ಈತನ ವಿರುದ್ಧ ಬೈಂದೂರು ಠಾಣೆಯಲ್ಲಿ 16, ಗಂಗೊಳ್ಳಿಯಲ್ಲಿ 3, ಕೊಲ್ಲೂರು ಮತ್ತು ಕುಂದಾಪುರ ಗ್ರಾಮಾಂತರದಲ್ಲಿ ತಲಾ 1 ಪ್ರಕರಣ ಸಹಿತ ಒಟ್ಟು 21 ಕೇಸುಗಳು ದಾಖಲಾಗಿವೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಕೆಲ ದಿನಗಳ ಹಿಂದೆ ಬೈಂದೂರು ತಾಲೂಕಿನಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದ ಬಾಲಕನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ ದೌರ್ಜನ್ಯಕ್ಕೆ ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಾಲಾ ಸಮಾರಂಭ ಗಳಿಗೆ ವರದಿ ಮಾಡಲು ತೆರಳು ತ್ತಿದ್ದ ಆರೋಪಿಯು, ಬಾಲಕರನ್ನು ಪರಿಚಯ ಮಾಡಿ ಕೊಳ್ಳುತ್ತಿದ್ದ. ಅವರ ಜತೆ ಆತ್ಮೀಯವಾಗಿ ಬೆರೆತು, ವಿಶ್ವಾಸ ಗಳಿಸುತ್ತಿದ್ದ. ನಂತರ ಮಕ್ಕಳ ಅಭಿರುಚಿಯನ್ನು ಗುರುತಿಸಿ ಗಾಯನ, ಫೋಟೊಗ್ರಫಿ, ನೃತ್ಯ ಹೇಳಿಕೊಡುವು ದಾಗಿ ಸೆಳೆಯುತ್ತಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪೋರ್ನ್ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ನಂತರ ವಿಷಯವನ್ನು ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಮಕ್ಕಳಿಗೆ ಚೂರಿ ತೋರಿಸಿ ಬೆದರಿಕೆಯೊಡ್ಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.