ಬೆಳ್ತಂಗಡಿ, ಡಿ 04(SM): ವಸತಿಯೋಜನೆಯೊಂದರ ಮನೆ ವಿಚಾರದಲ್ಲಿ ಪರಿಶೀಲನೆಗೆ ತೆರಳಿದ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯೊಬ್ಬರು ಆರ್ಟಿಐ ಕಾರ್ಯಕರ್ತರೊಬ್ಬರಿಗೆ ಬಿಸಿನೀರಾಭಿಷೇಕ ಮಾಡಿದ ಘಟನೆ ಉಜಿರೆಯಲ್ಲಿ ನಡೆದಿದೆ. ಆರ್ ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್ಟರ ಮೇಲೆ ಗ್ರಾ.ಪಂ. ಉಪಾಧ್ಯಕ್ಷೆ ವಿನುತಾರಜತ ಗೌಡ ಬಿಸಿನೀರು ಎರಚಿದ ಘಟನೆ ನಡೆದಿದೆ.
ಉಜಿರೆ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿನುತಾರಜತ ಗೌಡ ಅವರ ಅತ್ತೆ ವಸತಿ ಯೋಜನೆಯಲ್ಲಿ ಕಟ್ಟಿದ ಮನೆಯಲ್ಲಿ ಅವ್ಯವಹಾರವಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್ ತಾಲೂಕು ಪಂಚಾಯತ್ ಗೆ ದೂರು ನೀಡಿದ್ದರು.
ವಸತಿಯೋಜನೆಯ ಪ್ರಕಾರ ಏಳುನೂರು ಚದರ ಅಡಿ ಮನೆ ಇರುವಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಕಟ್ಟಿದ್ದಾರೆ ಎಂದು ಬಾಲಸುಬ್ರಹ್ಮಣ್ಯ ಭಟ್ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇ.ಓ ಕುಸುಮಧರ್, ಗ್ರಾ.ಪಂ. ಉಪಾಧ್ಯಕ್ಷೆ, ಸಿಬ್ಬಂದಿಗಳು, ಸದಸ್ಯರು ಪರಿಶೀಲನೆಗೆ ತೆರಳಿದ್ದರು. ಇವರೊಂದಿಗೆ ಬಾಲಸುಬ್ರಹ್ಮಣ್ಯ ಕೂಡ ತೆರಳಿದ್ದರು.
ಈ ಸಂದರ್ಭ ವಿನುತಾರಜತ ಗೌಡ ಅವರ ಅತ್ತೆ ಬಾಲಸುಬ್ರಹ್ಮಣ್ಯ ಭಟ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲೇ ವಿನುತಾರಜತ ಗೌಡ ಬಾಲಸುಬ್ರಹ್ಮಣ್ಯ ಭಟ್ಟರ ಮೇಲೆ ಬಿಸಿನೀರು ಎರಚಿದ್ದಾರೆ. ಘಟನೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ಟರ ಶರೀರದಲ್ಲಿ ಸುಟ್ಟ ಗಾಯಗಳಾಗಿದ್ದು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.