ನವದೆಹಲಿ,ಡಿ 05 (MSP): ಸಾಲವನ್ನು ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಅಸಲು ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಕಟ್ಟದೆ ವಿದೇಶಕ್ಕೆ ಪಲಾಯನ ಮಾಡಿ ಸದ್ಯ ಲಂಡನ್ನಲ್ಲಿ ಭಾರತಕ್ಕೆ ಗಡೀಪಾರಾಗುವ ಕೋರ್ಟ್ ಕೇಸನ್ನು ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ, "ನಾನು ಬ್ಯಾಂಕ್ ಗಳ ಅಸಲು ಮೊತ್ತವನ್ನು ಕಟ್ಟಲು ಸಿದ್ಧನಿದ್ದೇನೆ ದಯವಿಟ್ಟು ಇದನ್ನು ಸ್ವೀಕರಿಸಿ" ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಲ್ಯ, 'ಕಿಂಗ್ ಫಿಶರ್ ಏರ್ ಲೈನ್ಸ್ ಕಂಪೆನಿ ಅತ್ಯಧಿಕ ವಿಮಾನ ಇಂಧನ ಬೆಲೆಯಿಂದ ಕುಸಿಯಿತು. ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಸಂಕಷ್ಟ ಸ್ಥಿತಿ ತಲುಪಿತು. ಬ್ಯಾಂಕ್ ನಿಂದ ಪಡೆದುಕೊಂಡಿದ್ದ ಸಾಲದ ಹಣವೆಲ್ಲ ಕಿಂಗ್ ಫಿಶರ್ಗಾಗಿ ನಷ್ಟಕ್ಕೇ ವಿನಿಯೋಗವಾಗಿತ್ತು.
ತಮ್ಮನ್ನು ’ಸಾಲಗಾರ, ಪಲಾಯಗಾರ’ ಎಂದು ಹೆಸರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ರಾಜಕಾರಣಿಗಳು ಮತ್ತು ಮಾಧ್ಯಮದವರು ನನ್ನನ್ನು ಪಿಎಸ್ ಯು ಬ್ಯಾಂಕ್ ಹಣದೊಂದಿಗೆ ಓಡಿ ಹೋಗುವವನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನನಗೆ ನ್ಯಾಯೋಚಿತ ವಿಚಾರಣೆಯ ಅವಕಾಶವನ್ನು ಯಾಕಾಗಿ ನೀಡಲಾಗುತ್ತಿಲ್ಲ. ಆ ಬಗ್ಗೆ ನನಗೆ ದುಃಖವಿದೆ; ನನ್ನ ಬ್ಯಾಂಕ್ ಸಾಲದ ಶೇ.100 ಅಸಲು ಮೊತ್ತವನ್ನು ತೀರಿಸುವ ನನ್ನ ಈ ಪ್ರಸ್ತಾವವನ್ನು ಕರ್ನಾಟಕ ಹೈಕೋರ್ಟ್ ಮುಂದೆ ಮಂಡಿಸಬೇಕೆಂದು ನಾನು ಕೋರುತ್ತೇನೆ'' ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.