ಬೆಳ್ಮಣ್, ಡಿ 05(SM): ಕೊಡೈಕನಲ್ ಪ್ರವಾಸ ಮುಗಿಸಿ ಕೇರಳ ಮೂಲಕ ರೈಲಿನಲ್ಲಿ ಮಂಗಳವಾರ ಮುಂಜಾನೆ ವಾಪಾಸಾಗುತ್ತಿದ್ದ ಯುವಕರ ತಂಡದಲ್ಲಿದ್ದ ಕಾರ್ಕಳ ತಾಲೂಕಿನ ಯುವಕನೊಬ್ಬ ರೈಲಿನಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮುಂಡ್ಕೂರಿನ ಶೈಲೇಶ್ ರಾವ್ ಬಡಾಗರ್ ರೈಲ್ವೇ ಸ್ಟೇಷನ್ನಲ್ಲಿ ಅಪಘಾತಕ್ಕಿಕಡಾಗಿ ಮೃತಪಟ್ಟವರು.
ದುಬೈನಿಂದ ಇತ್ತಿಚೆಗಷ್ಟೇ ಬಂದಿದ್ದ ಶೈಲೇಶ್ ರಾವ್ ತನ್ನ ಕಾಲೇಜಿನ ಮೂವರು ಮಿತ್ರರ ಜತೆ ಕೊಡೈಕನಲ್ಗೆ ಪ್ರವಾಸಕ್ಕೆ ತೆರಳಿದ್ದರು. ಕೊಡೈಕನಲ್ನಿಂದ ಕೇರಳ ಮೂಲಕ ರೈಲಿನಲ್ಲಿ ವಾಪಾಸಾಗುತ್ತಿದ್ದಾಗ ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಬಡಾಗರ್ ಸ್ಟೇಷನ್ನಲ್ಲಿ ಕುಡಿಯುವ ನೀರಿಗಾಗಿ ಶೈಲೇಶ್ ರೈಲಿನಿಂದ ಇಳಿದಿದ್ದಾರೆ. ಈ ಸಂದರ್ಭ ರೈಲು ಬಿಟ್ಟಿತೆಂಬ ಅವಸರದಲ್ಲಿ ಹತ್ತಲು ಪ್ರಯತ್ನಿಸಿ ಆಯ ತಪ್ಪಿ ರೈಲಿನಡಿಗೆ ಸಿಕ್ಕಿ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಶೈಲೇಶ ಮತ್ತು ಮಿತ್ರರಿದ್ದ ರೈಲು ಮಂಗಳವಾರ ಬೆಳಿಗ್ಗೆ 7ರ ಹೊತ್ತಿಗೆ ಮಂಗಳೂರು ತಲುಪಿದಾಗಲಷ್ಟೇ ಉಳಿದವರಿಗೆ ಶೈಲೇಶ ರೈಲಿನಲ್ಲಿರದ ಬಗ್ಗೆ ಮಾಹಿತಿ ತಿಳಿದಿದೆ. ಕೂಡಲೇ ಆತನ ಮೊಬೈಲ್ಗೆ ಕರೆ ಮಾಡಿದಾಗ ವಡಾಕರ್ ಸ್ಟೇಷನ್ನ ಪೊಲೀಸರು ಮೊಬೈಲ್ ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೋಷಕರ ಕರೆಗೂ ಪೊಲೀಸರೇ ಉತ್ತರಿಸಿದ್ದರು.
ಇತ್ತ ಮುಂಡ್ಕೂರಿನಲ್ಲಿ ಶೈಲೇಶನ ಪೋಷಕರು ಕರೆ ಮಾಡಿದಾಗಲೂ ವಡಾಕರ್ ಸ್ಟೇಷನ್ನ ಪೊಲೀಸರೇ ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು ಶೈಲೇಶನ ಮನೆಯವರು ಅಲ್ಲಿ ತಲುಪಿದಾಗ ಮಿತ್ರರೂ ಅದೇ ಕ್ಷಣ ಅಲ್ಲಿಗೆ ತಲುಪಿದ್ದರು.
ಮುಂಡ್ಕೂರಿನ ಕಂಗುಳಿ ಯೋಗೀಶ್ ಭಟ್ ಹಾಗೂ ರೇಖಾ ರಾವ್ ದಂಪತಿ ಪುತ್ರನಾದ ಶೈಲೇಶ್ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಡಿಪ್ಲೊಮಾ ಪಡೆದು ಕಳೆದ ಮೂರು ವರ್ಷಗಳಿಂದ ದುಬಾಯಿನಲ್ಲಿ ಉದ್ಯೋಗಿಯಾಗಿದ್ದರು. ಕಳೆದ ೧೫ ದಿನಗಳ ಹಿಂದೆ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದರು.