ಮಂಗಳೂರು,ಡಿ 06 (MSP): ಮಂದಿರ ಕಟ್ಟುತ್ತೇವೆ ಎಂದು ಆಶ್ವಾಸನೆ ನೀಡಿ ಹಿಂದಿನ ಚುನಾವಣೆ ಗೆದ್ದ ಬಿಜೆಪಿಗೆ ಬಳಿಕ ನಾಲ್ಕೂವರೆ ವರ್ಷ ಶ್ರೀರಾಮ ಮಂದಿರ ನಿರ್ಮಾಣ ವಿಚಾರ ಮರೆತೇ ಹೋಗಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಮತ್ತೆ ಬಿಜೆಪಿಗೆ ದೇವರು ನೆನಪಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಾರ್ಧನ ಪೂಜಾರಿಯವನ್ನು ನಿಂದಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ನ.6 ರ ಗುರುವಾರ ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಂದಿರ ಹೆಸರಿನಲ್ಲಿ ರಾಜಕೀಯ ಮಾಡಿ ಯಾಕೆ ಸಮಾಜವನ್ನು ವಿಭಜಿಸುತ್ತೀರಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ಹಿಂದೂ ಹಾಗೂ ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿ ಈ ಸಮಸ್ಯೆಯನ್ನು ಸೌಹಾರ್ಧವಾಗಿ ಬಗೆಹರಿಸಬಹುದು ಆದರೆ ಬಿಜೆಪಿಗೆ ಆ ಇಚ್ಚೆ ಇಲ್ಲ ಎಂದರು. ಭಾರತೀಯ ಜನತಾ ಪಾರ್ಟಿಗೆ ಆಯೋಧ್ಯೆಯಲ್ಲಿ ಮಸೀದಿಯೂ ಇರಲಿ ಮಂದಿರವೂ ಇರಲಿ ಎನ್ನುವ ಇಚ್ಚೆಯೂ ಯಾಕೆ ಮೂಡುವುದಿಲ್ಲ ಎಂದು ಪ್ರಶ್ನಿಸಿದರು. ನಮ್ಮ ದೇಶ ಜ್ಯಾತ್ಯಾತೀತ ದೇಶ, ದೇಶವನ್ನು ಒಗ್ಗೂಡಿಸಲು ನೋಡಬೇಕೇ ಹೊರತೇ ಇಬ್ಭಾಗ ಮಾಡಬಾರದು. ನಮಗೆ ಮಸೀದಿ, ಮಂದಿರ ಚರ್ಚ್ ಎಲ್ಲವೂ ಬೇಕು. ದೇವರು ಸಮಾಜವನ್ನು ಎಂದೂ ಇಬ್ಭಾಗ ಮಾಡಿಲ್ಲ. ಹೀಗಾಗಿ ಮಂದಿರಬೇಕು ಎನ್ನುವ ಪೂಜಾರಿ ಅವರ ಹೇಳಿಕೆಯನ್ನು ಅಪಾರ್ಥ ಮಾಡಬಾರದು ಎಂದು ವಿನಂತಿಸಿದರು.
ಬಿ ಜನಾರ್ಧನ ಪೂಜಾರಿ ಅವರು ಓರ್ವ ರಾಷ್ಟ್ರೀಯ ನಾಯಕರಾಗಿದ್ದು, ರಾಜಕೀಯ, ಧಾರ್ಮಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅವರು ಹಿರಿಯ ಚೇತನರಾಗಿದ್ದಾರೆ, ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದವರು. ಆದರೆ ಅನಾಮಧೇಯ ವ್ಯಕ್ತಿಯೊಬ್ಬರು ಹಿಡನ್ ಅಜೆಂಡಾ ಇಟ್ಟುಕೊಂಡು ಪೂಜಾರಿ ಅವರನ್ನು ಕೀಳಾಗಿ ಚಿತ್ರಿಸಿ ಅವರನ್ನು ದೇಶದ್ರೋಹಿ ಹಾಗೂ ಎನ್ ಕೌಂಟರ್ ಮಾಡಬೇಕೆಂದು ದ್ವನಿಮುದ್ರಿಕೆಯಲ್ಲಿ ಕೀಳಾಗಿ ನಿಂದಿಸಿದ್ದಾರೆ. ಇವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಕಮೀಷನರ್ ಅವರನ್ನು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತ, ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಾರಾಯಣ ಗುರು ಸಂಘಟನೆ ಕಾವೂರು ಇವರು ಕಾವೂರು ಠಾಣೆಯಲ್ಲಿ ಮನವಿ ಸಲ್ಲಿದ್ದಾರೆ. ಹೀಗಾಗಿ ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಕೇಸು ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.