ಉಡುಪಿ, ಡಿ06(SS): ಮತ್ತೆ ಕರಾವಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಚೆಂಡೆ ಸದ್ದು ಮೊಳಗಿದೆ. ಕೇವಲ ಚೆಂಡೆ ಸದ್ದು ಮಾತ್ರವಲ್ಲ, ಚೆಂಡೆ ಸದ್ದಿನ ಜೊತೆಗೆ ಯುವ ಪ್ರತಿಭೆಯೊಬ್ಬರು ವಿಭಿನ್ನವಾಗಿ ಹಾಡುವುದರ ಮೂಲಕ ಕ್ಷಣ ಮಾತ್ರದಲ್ಲಿ ಕರಾವಳಿಗರ ಮನ ಗೆದ್ದಿದ್ದಾರೆ.
ಕರಾವಳಿ ಮಣ್ಣ ಕಲೆ ಚೆಂಡೆಯ ಸದ್ದಿಗೆ ಮನಸೋಲದವರು ಯಾರೂ ಇಲ್ಲ. ಚೆಂಡೆಯನಾದನಿನಾದ ಕೇಳಿಬಂದರೆ ಸಾಕು ಮೈಮನ ಒಮ್ಮೆ ನವಿರೇಳುತ್ತದೆ. ಚೆಂಡೆಯ ಸದ್ದಿಗೆ ಕೂತಲ್ಲೇ ಕುಣಿದಾಡೋ ಅದೆಷ್ಟೋ ಮಂದಿ ನಮ್ಮಲ್ಲಿ ಇದ್ದಾರೆ. ಇದೀಗ ಕೇರಳ ಚೆಂಡೆಗೆ ಸರಿಸಾಟಿ ಎನಿಸಬಲ್ಲ ವಿಭಿನ್ನ ಶೈಲಿಯ ಸಂಗೀತ ಉಡುಪಿಯಲ್ಲಿ ಮೊಳಗಿದೆ. ಚೆಂಡೆಯ ಪೆಟ್ಟಿನ ಜೊತೆಗೆ ಕಲಾವಿದರೊಬ್ಬರು ಅದ್ಭುತವಾಗಿ ಹಾಡು ಹಾಡುತ್ತಾ ಕರಾವಳಿಗರ ಮನಸೂರೆಗೊಳಿಸಿದ್ದಾರೆ.
ಹೌದು, ಈ ಚೆಂಡೆಯ ಪೆಟ್ಟಿನೊಂದಿಗಿನ ಸಂಗೀತವನ್ನು ಆಲಿಸುವಾಗ, ನೋಡುವಾಗ ಹೀಗೂ ಚೆಂಡೆ ಬಾರಿಸುತ್ತಾರಾ ಅನ್ನೋ ಅನುಮಾನ ನಮ್ಮೆಲ್ಲರನ್ನು ಕಾಡುತ್ತದೆ. ಅಷ್ಟಕ್ಕೂ ಇಂತಹ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಉಡುಪಿಯ ಯುವಕರ ಚೆಂಡೆ ಬಳಗ. ಹಾಡು ಮತ್ತು ಚೆಂಡೆಯ ನಿನಾದದಿಂದ ಉಡುಪಿಯ ಯುವಕರ ಚೆಂಡೆ ಬಳಗದವರು ಎಲ್ಲರ ಹುಬ್ಬೇರಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸುಭಾಸ್ ನಗರದ ಪುಟ್ಟ ಹಳ್ಳಿಯಲ್ಲಿ ಈ ಚೆಂಡೆ ನಿನಾದ ಬಹಳ ವಿಭಿನ್ನವಾಗಿ ಪ್ರದರ್ಶನಗೊಂಡಿದೆ. 27 ವರ್ಷ ವಯಸ್ಸಿನ ಯುವ ಕಲಾವಿದ ಚೇತನ್ ಎಂಬ ಪ್ರತಿಭೆಯ ಹಾಡಿನ ತಾಳಕ್ಕೆ ತಕ್ಕಂತೆ ಈ ಚೆಂಡೆ ಬಳಗದವರು ಚೆಂಡೆ ಬಾರಿಸಿದ್ದಾರೆ. ಮಾತ್ರವಲ್ಲ, ಚೆಂಡೆ ಬಾರಿಸುವ ಮೂಲಕ ಚೆಂಡೆ ಶೈಲಿಯಲ್ಲಿ ನೂತನ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿ ಎಲ್ಲರ ಮೊಗದ ನಗುವಿಗೆ ಕಾರಣವಾಗಿದ್ದಾರೆ.
ಅಪ್ಪಟ ವಾಲಿಬಾಲ್ ಅಭಿಮಾನಿಯಾಗಿರುವ ಚೇತನ್, ಪಂದ್ಯದ ವೇಳೆ ಬಿಡುವಿನ ಸಮಯದಲ್ಲಿ ತನ್ನೊಳಗಿನ ಕಲೆಯೊಡನೆ ಪ್ರೇಕ್ಷಕರನ್ನು, ಆಟಗಾರನ್ನು, ಸಂಘಟಕರನ್ನು ಹುಚ್ಚೆದು ನಗೆ ಕಡಲಲ್ಲಿ ತೇಲಿಸಿ, ಮನರಂಜನೆ ನೀಡುವ ಮಹಾ ಚತುರ. ಇದೀಗ ಈ ಚೆಂಡೆ ಬಳಗದ ವಿಶಿಷ್ಟ ರೀತಿಯ ಸದ್ದು ಮತ್ತು ಹಾಡು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ. ಎಲ್ಲರ ಫೇಸ್ಬುಕ್, ವಾಟ್ಸಪ್ಗಳಲ್ಲಿ ಹರಿದಾಡುತ್ತಿದೆ. ಜೊತೆಗೆ ಈ ನೂತನ ಪ್ರಯತ್ನಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ ಯುವ ಪ್ರತಿಭೆ ಚೇತನ್, ನಾನು ಯಾವುದೇ ರೀತಿಯ ತಯಾರಿ ನಡೆಸಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಹಾಡು ಹಾಡಲು ಒತ್ತಾಯಿಸಿದರು. ಒತ್ತಾಯದ ಮೇರೆಗೆ ನಾನು ಚೆಂಡೆಯ ನಿನಾದದೊಂದಿಗೆ ಹಾಡು ಹಾಡಿದ್ದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಾಡು ವೈರಲ್ ಆಗಬಹುದು ಎಂದು ಕನಸಿನಲ್ಲೂ ಎನಿಸಿರಲಿಲ್ಲ. ಎಲ್ಲರ ಪ್ರೀತಿ, ಅಭಿಮಾನ, ಪ್ರೋತ್ಸಾಹಕ್ಕೆ ನಾನು ಆಭಾರಿ ಎಂದು ತಿಳಿಸಿದ್ದಾರೆ.