ಪಣಜಿ,ಡಿ 07 ( MSP): ಹೊರ ರಾಜ್ಯಗಳ ಮೀನು ಪೂರೈಕೆ ಮೇಲೆ ನಿಷೇಧ ಹೇರಿದ್ದ ಗೋವಾ ಇದೀಗಾ ಕೆಲವು ನಿಬಂಧನೆಗಳೊಂದಿಗೆ ಈ ನಿಯಮವನ್ನು ಸಡಿಲಿಸಿದ್ದು, ಇದು ರಾಜ್ಯದ ಮೀನುಗಾರರಿಗೆ ನೆಮ್ಮದಿ ತಂದಿದೆ. ಹೀಗಾಗಿ ಕರ್ನಾಟಕದಿಂದ ಗೋವಾಕ್ಕೆ ಗುರುವಾರದಿಂದ ಮೀನು ಪೂರೈಕೆ ಮತ್ತೆ ಆರಂಭಗೊಂಡಿದೆ. ಹೀಗಾಗಿ ರಾಜ್ಯದ 9 ಟ್ರಕ್ ಮೀನುಗಳು ಗೋವಾ ಮಾರುಕಟ್ಟೆಗೆ ತಲುಪಿದೆ.
ಅಲ್ಲಿನ ಸರ್ಕಾರ ವಿಧಿಸಿರುವ ನಿಯಮದಂತೆ ಇನ್ಸುಲೇಟೆಡ್ ವೆಹಿಕಲ್ ಗಳ ಮೂಲಕ ಗೋವಾಕ್ಕೆ ಮೀನನ್ನು ರವಾನೆ ಮಾಡಲಾಗಿದೆ. ಇದರಿಂದಾಗಿ ಕರ್ನಾಟಕ ರಾಜ್ಯದ ಮೀನುಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಈ ಬಗ್ಗೆ ಮಾತನಾಡಿದ ಗೋವಾ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಗೋವಾ ಸರ್ಕಾರವೂ ಎಫ್ಡಿಎ ಕಾಯ್ದೆಯಡಿ ಜಾರಿಗೆ ತಂದಿದ್ದ ನಿಯಮಗಳನ್ನು ಪಾಲಿಸುವವರಿಗೆ ಮಾತ್ರ ಗೋವಾ ಮೀನು ಮಾರುಕಟ್ಟೆಗೆ ಪ್ರವೇಶ ನೀಡಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಮೀನು ಹೇರಿಕೊಂಡು ಬಂದ ವಾಹನಗಳನ್ನು ಗಡಿ ಭಾಗದಲ್ಲಿ ನಮ್ಮ ಆರ್ಟಿಒ ಮತ್ತು ಪೊಲೀಸರು ತಪಾಸಣೆ ಮಾಡಿದ್ದು ಅವರಿಗೆ ಆಕ್ಷೇಪಾರ್ಹ ಯಾವುದೇ ವಿಚಾರಗಳು ಕಂಡು ಬಂದಿಲ್ಲ. ಹೀಗಾಗಿ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದರು.
ಮೀನನ್ನು ತಾಜಾ ಇಡಲು ಫಾರ್ವಲಿನ್ ಹಾಗೂ ಫಾರ್ವಲ್ಡಿಹೈಡ್ ರಾಸಾಯನಿಕ ಬಳಸಲಾಗುತ್ತದೆ ಎಂಬ ಅನುಮಾನ ಗೋವಾ ಆಹಾರ ನಿರ್ದೇಶನಾಲಯದ್ದು. ಹೊರ ರಾಜ್ಯಗಳಿಂದ ಗೋವಾಕ್ಕೆ ಪೂರೈಕೆಯಾಗುವ ಶೀತಲೀಕರಿಸಿದ, ತಾಜಾ ಮೀನುಗಳಿಗೆ ಈ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ರಾಜ್ಯಗಳ ಮೀನು ರಾಜ್ಯಕ್ಕೆ ಪ್ರವೇಶಿಸದಂತೆ ತಡೆಹಿಡಿದಿತ್ತು.