ಮಂಗಳೂರು ಅ17: ಮಂಗಳೂರಿನ ರಸ್ತೆಗಳಲ್ಲಿನ ಬ್ರಹತ್ತ್ ಹೊಂಡಗಳನ್ನು ಮುಚ್ಚುವಲ್ಲಿ ನಗರ ಪಾಲಿಕೆಯು ತೋರಿಸುತ್ತಿರುವ ಅವಗಣನೆಯನ್ನು ಪ್ರತಿಭಟಿಸಿ ಎಂಸಿಸಿ ಸಿವಿಕ್ ಗ್ರೂಪ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಕಂಕನಾಡಿ ಬಸ್ ನಿಲ್ದಾನದ ಪ್ರಮುಖ ರಸ್ತೆಯಲ್ಲಿನ ಹೊಂಡಗಳಲ್ಲಿ ಬೆಸ್ತರ ವೇಷ ಧರಿಸಿ ಕಾಗದದ ದೋಣಿಗಳನ್ನು ತೇಲಿಬಿಡುವುದರೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.
ಮಳೆಗಾಲದಲ್ಲಿ ಮಂಗಳೂರಿನ ರಸ್ತೆಗಳು ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ನರಕ ಸದೃಶವಾಗುವುದು ಸಾಮಾನ್ಯ. ಆದರೆ ಮಳೆಗಾಲ ಮುಗಿಯುತ್ತಾ ಬಂತಾದರೂ ನಗರಪಾಲಿಕೆಯು ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇಲ್ಲಿನ ರಸ್ತೆಗಳಲ್ಲಿ ಈ ಹೊಂಡಗಳಿಂದಾಗಿ ಅಪಘಾತಗಳು ಸರ್ವೇ ಸಾಮನ್ಯ. ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಹಲವಾರು ದ್ವಿ ಚಕ್ರ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಜೀವಹಾನಿ ಉಂಟಾಗಿದೆ. ಆದರೂ ನಗರಪಾಲಿಕೆ ಕಣ್ಣುಗಳನ್ನು ಕುರುಡು ಮಾಡಿಕೊಂಡು ಕುಳಿತಿದೆ ಎಂದು ಪ್ರತಿಭಟನಾಕಾರರು ನಗರ ಪಾಲಿಕೆಯ ಮೇಲೆ ಹರಿಹಾಯ್ದರು.
ಇದೇ ಸಂಧರ್ಭದಲ್ಲಿ ಮಾತಾನಾಡಿದ ಜೆರಾಲ್ಡ್ ಟವರ್ಸ್ " ಮಂಗಳೂರಿನ ಕಂಕನಾಡಿ,ಬೆಂದೂರ್ ವೆಲ್, ಜ್ಯೋತಿ ಹಾಗೂ ಪಡೀಲ್ ಪ್ರದೇಶದ ರಸ್ತೆಗಳು ನೆಲಮಾರ್ಗ ಎನ್ನುವುದಕ್ಕಿಂತಲೂ ಜಲಮಾರ್ಗ ಎಂದು ಕರೆಯಲು ಯೋಗ್ಯವಾದುವು. ಜನರ ತೆರಿಗೆಯನ್ನು ಚಾಚೂ ತಪ್ಪದೆ ಸ್ವೀಕರಿಸುವ ಅಧಿಕಾರಿಗಳು ರಸ್ತೆಗಳ ನಿರ್ವಹಣೆಗೆ ಯಾಕೆ ಮುಂದಾಗುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ. ದಿನನಿತ್ಯ ಸಾವಿರಾರು ಜನರು ಭೇಟಿ ನೀಡುವ ಕಂಕನಾಡಿ ಪ್ರದೇಶದ ಬಗ್ಗೆ ನಗರಪಾಲಿಕೆಗೆ ಯಾವುದೇ ಕಾಳಜಿಯಿಲ್ಲ ಎಂದು ಇಲ್ಲಿನ ರಸ್ತೆಗಳಲ್ಲಿನ ಹೊಂಡಗಳನ್ನು ನೋಡಿದಾಗಲೇ ಅರ್ಥವಾಗುತ್ತದೆ. ಇದು ಹೀಗೆಯೇ ಮುಂದುವರೆದರೆ ಉಗ್ರ ಪ್ರತಿಭಟನೆಯೊಂದಿಗೆ ತೆರಿಗೆ ನೀಡದೆ ನಗರ ಸಭೆಗೆ ಬಹಿಷ್ಕಾರ ಹಾಕುವ ಬಗ್ಗೆ ಅಲೋಚಿಸಬೇಕಾದಿತು." ಎಂದು ಎಚ್ಚರಿಸಿದರು.