ಮೂಡುಬಿದಿರೆ, ಡಿ 07(SM): ಪತ್ನಿಯ ಬಲಗೈಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಪಡುಮಾರ್ನಾಡಿನಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ಕುಪ್ಪೆಪದವಿನ ರವಿರಾಜ್ ಶೆಟ್ಟಿ ತನ್ನ ಪತ್ನಿ ಸೌಮ್ಯ ಶೆಟ್ಟಿ(29) ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೌಮ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿರಾಜ್ ಹೊಟೆಲ್ ಉದ್ಯೋಗಿಯಾಗಿದ್ದು ಸೌಮ್ಯ ಸಾಣೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ದಂಪತಿ ಮಧ್ಯೆ ವೈಮನಸ್ಸಿನ ಕಾರಣಕ್ಕೆ ಪತಿಯಿಂದ ದೂರವಾಗಲು ಯತ್ನಿಸಿದ ಸೌಮ್ಯ ಅವರು ಬಳಿಕ ತನ್ನ ತವರು ಮನೆಗೆ ಬಂದು ಉಳಿದುಕೊಂಡಿದ್ದರೆನ್ನಲಾಗಿದೆ.
ಪತ್ನಿಯ ವರ್ತನೆಯಿಂದ ನೊಂದಿದ್ದ ರವಿರಾಜ್ ಶುಕ್ರವಾರ ಸೌಮ್ಯ ಪಡುಮಾರ್ನಾಡಿನಲ್ಲಿ ಶಾಲೆಗೆ ಹೋಗಲು ಬಸ್ಸಿಗಾಗಿ ಕಾದು ನಿಂತಲ್ಲಿಗೆ ಬಂದು ಹಲ್ಲೆ ನಡೆಸಿದ್ದಾರೆ. ಘಟನೆ ಕಂಡು ಅಕ್ಕಪಕ್ಕದವರು ಧಾವಿಸಿ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿ ಪತ್ನಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸುದ್ದಿ ತಿಳಿದು ಸ್ಥಳೀಯರು ರವಿರಾಜ್ ಅವರನ್ನು ರಕ್ಷಿಸಿದ್ದಾರೆ.
ಘಟನೆಯ ಕುರಿತಂತೆ ಮೂಡುಬಿದಿರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.