ಕುಂದಾಪುರ, ಡಿ 07(SM): ಟೋಲ್ ವಿರುದ್ಧದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ನಾವು ಸ್ಥಳೀಯರು ಟೋಲ್ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೀವಿ, ನಾವು ಟೋಲ್ ಕಟ್ಟಲ್ಲ, ನಮಗೆ ವಿನಾಯಿತಿ ಕೊಡಿ ಎಂದು ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಿರ್ಮಾಣವಾದ ನವಯುಗ ಕಂಪೆನಿಯ ಟೋಲ್ ವಿರುದ್ಧ ಸಾರ್ವಜನಿಕರು ಪಕ್ಷ ಭೇದ ಮರೆತು ತೊಡೆ ತಟ್ಟಿದ್ದಾರೆ.
ಸ್ಥಳೀಯರ ಪ್ರತಿಭಟನೆಗೆ ಮಣಿದ ನವಯುಗ ಕಂಪೆನಿ ಪ್ರಮುಖ ಮೂರು ಬೇಡಿಕೆಯಲ್ಲಿ ಎರಡೂ ಬೇಡಿಕೆಯನ್ನು ಈಡೇರಿಸಿದೆ. ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಖಾಸಗಿ ಮತ್ತು ಟ್ಯಾಕ್ಸಿ ವಾಹನಗಳಿಗೆ ಟೋಲ್ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಹೆದ್ದಾರಿ ೬೬ರ ಸಾಸ್ತಾನದಲ್ಲಿ ನಿರ್ಮಾಣವಾದ ನವಯುಗ ಕಂಪನಿಯ ಟೋಲ್ ವಿರುದ್ಧ ಕಳೆದ ಹಲವು ತಿಂಗಳಿನಿಂದ ಟೋಲ್ ಹೋರಾಟ ಸಮಿತಿ ವತಿಯಿಂದ ನಿರಂತರ ಹೋರಾಟ ನಡೆಯುತ್ತಿದೆ. ನವಯುಗ ಕಂಪೆನಿ ಕಳೆದ ಹಲವಾರು ವರ್ಷಗಳಿಂದ ಚತುಷ್ಪಥ ಕಾಮಗಾರಿ ನಡೆಸುತ್ತಿದ್ದು ಕಾಮಗಾರಿ ಸಂಪೂರ್ಣಗೊಳಿಸದೆ ಟೋಲ್ ವಸೂಲಾತಿ ಆರಂಭಿಸಿದ್ದಾರೆ. ಟೋಲ್ ವಸೂಲಾತಿ ವಿರುದ್ಧ ಕಳೆದ ಹಲವಾರು ತಿಂಗಳಿಂದ ಸಾರ್ವಜನಿಕರಿಂದ ಹೋರಾಟ ನಡೆಯುತ್ತಿದ್ದು ಟೋಲ್ ಸಂಗ್ರಹದ ವಿರುದ್ಧ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯರಿಗೆ ಟೋಲ್ ವಿನಾಯಿತಿ ಕೋರಿ ಸಭೆಯಲ್ಲಿ ಘೋಷಣೆ ಕೂಗಲಾಯಿತು. ಟೋಲ್ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಕೇಮಾರು ಶ್ರೀ ಮತ್ತು ಬಾಳೆಕುದ್ರು ಶ್ರೀಗಳು ಭಾಗವಹಿಸಿದ್ದರು. ಟೋಲ್ ವಸೂಲಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲೆಯ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ಟೋಲ್ ವಿನಾಯಿತಿ ಕೋರಿ ಸಭೆ ನಡೆಸಿದರು.
ಸ್ಥಳೀಯರಿಗೆ ಟೋಲ್ ವಿನಾಯಿತಿ ಕೋರಿ ನಡೆದ ಬೃಹತ್ ಪ್ರತಿಭಟನೆ ಸಭೆ ಉಗ್ರ ಹೋರಾಟದ ಸ್ವರೂಪ ತಳೆದು ಟೋಲ್ಗೆ ಮುತ್ತಿಗೆ ಹಾಕಿದ ಸಂದರ್ಭ ಹೋರಾಟಗಾರರನ್ನು ಬಂಧಿಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘಪತಿ ಭಟ್ ಮತ್ತು ಸಾರ್ವಜನಿಕರನ್ನು ಬಂಧಿಸಿ ಬಿಡುಗಡೆಮಾಡಲಾಯಿತು.
ಟೋಲ್ ವಿರುದ್ಧದ ಪ್ರತಿಭಟನೆಗೆ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಕಳೆದ ಹಲವಾರು ತಿಂಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ಕೋರಿ ನಡೆಯುತ್ತಿರುವ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಉಡುಪಿ ಜಿಲ್ಲೆಯ ಟ್ಯಾಕ್ಸಿ ವಾಹನಗಳಿಗೆ ಸಂಪೂರ್ಣ ಟೋಲ್ ವಿನಾಯಿತಿ ನೀಡುವಂತೆ ಆಗ್ರಹಿಸಿ ಹೋರಾಟ ಮುಂದುವರಿಯಲಿದೆ.