ವಿಟ್ಲ, ಡಿ 09( MSP): ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಮಾಡಿದ ಹಾಗೂ ಅನಧಿಕೃತವಾಗಿ ಒಳ ರಸ್ತೆಯಲ್ಲಿ ಸಂಚರಿಸಿದ ಲಾರಿಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ದಂಡ ವಿಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಹಳೀರ ಎಂಬ ಸ್ಥಳದಲ್ಲಿ ರಸ್ತೆಯಲ್ಲಿ ಕೆಟ್ಟು ನಿಂತು ಸುಮಾರು 4 ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿ ಮಾಡಿದ ಲಾರಿಯಲ್ಲಿ ಅತಿಯಾದ ಭಾರ ಇದ್ದುದೇ ಕಾರಣ ಎಂದು ತನಿಖಾ ವರದಿ ಹೇಳಿದೆ. ಅಧಿಕ ತೂಕವನ್ನು ತುಂಬಿಸಿಕೊಂಡು ಹೋಗುವುದು ಕಾನೂನು ಬಾಹಿರ ಹೀಗಾಗಿ 30 ಸಾವಿರಕ್ಕೂ ಅಧಿಕ ದಂಡವನ್ನು ವಿಧಿಸಲಾಗಿದೆ.
ಕೇರಳಕ್ಕೆ ಕಬ್ಬಿಣ ಸಾಗಿಸುವ ನಿಟ್ಟಿನಲ್ಲಿ ನೂರಾರು ಕಿ.ಮೀ. ಸುತ್ತುವ ಬದಲಾಗಿ ಕಲ್ಲಡ್ಕ - ಸಾರಡ್ಕ ಕಿರಿದಾದ ಭಾರಿ ವಾಹನಗಳಿಗೆ ಯೋಗ್ಯವಲ್ಲದ ರಸ್ತೆಯಲ್ಲಿ ಸಂಚರಿಸಿದ 22 ಚಕ್ರದ ಲಾರಿಗೆ 10 ಸಾವಿರಕ್ಕೂ ಅಧಿಕ ದಂಡವನ್ನು ಸಾರಿಗೆ ಇಲಾಖೆ ವಿಧಿಸಿದೆ.
ನಿಗದಿತ ಭಾರಕ್ಕಿಂತ ಹೆಚ್ಚಿದ ಬಾರ ಹೇರಿಕೊಂಡು ಹೋಗುತ್ತಿರುವ ಲಾರಿಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದುಕೊಂಡು ಸಾರಿಗೆ ಇಲಾಖೆಗೆ ಹಸ್ತಾಂತರಿಸುವ ಕಾರ್ಯವನ್ನು ಮುಂದುವರಿಸಿದೆ.