ಮೈಸೂರು,ಡಿ 09( MSP):ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 10ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಲಿದ್ದಾರೆ. ಮಾತ್ರವಲ್ಲ ಅವರು ವಿದೇಶಿ ಪ್ರವಾಸಕ್ಕೆ ತೆರಳಲಿದ್ದಾರೆ.
ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಜವಬ್ದಾರಿಯೂ ಇದೆ. ಹೀಗಾಗಿ ಅಧಿವೇಶನ ಸಂದರ್ಭದಲ್ಲಿ ಅವರ ಹಾಜರಿಗೆ ವಿಶೇಷ ಮಹತ್ವವಿದೆ. ಇದಲ್ಲದೆ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯದ ಬಾವುಟ ಹಾರಾಡಿದಾಗಲೆಲ್ಲ ಸಿದ್ದರಾಮಯ್ಯ ಅವರೇ ಇದಕ್ಕೆ ಮುಲಾಮು ಹಚ್ಚಿದ್ದರು. ಹೀಗಾಗಿ ಇದೆಲ್ಲದರ ನಡುವೆ ವಿದೇಶಿ ಪ್ರವಾಸಕ್ಕೆ ತೆರಳಲು ಮುಂದಾಗಿರುವುದು ಅವರ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿತ್ತು.
ವಿದೇಶಿ ಪ್ರವೇಶಕ್ಕೆ ತೆರಳುವ ಸುದ್ದಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾದ್ಯಮದವರು ಪ್ರಶ್ನಿಸಿದ್ದಕ್ಕೆ ಗರಂ ಆಗಿಯೇ ಉತ್ತರಿಸಿದರು. ನಾನು ವಿದೇಶಕ್ಕೆ ಹೋಗೋದು ಏನ್ ಅಫೆನ್ಸಾ..? ಎಲ್ಲವನ್ನೂ ನಿಮ್ಮ ಮುಂದೆ ಹೇಳಿ ಹೋಗಬೇಕಾ? ವಿದೇಶಕ್ಕೆ ಹೋಗೋದು ತಪ್ಪು ಅಂದ್ರೆ ಹಾಗೇ ಬರೆದುಕೊಳ್ಳಿ ಎಂದರು.
ಆ ಬಳಿಕ ನನಗೂ ವೈಯಕ್ತಿಕ ಬದುಕಿದ್ದೂ , ನನ್ನ ಸ್ನೇಹಿತರ ಮನೆಯಲ್ಲಿ ಮದುವೆ ಇದೆ ಹೀಗಾಗಿ ವಿದೇಶಕ್ಕೆ ಹೋಗ್ತಿದ್ದೀನಿ ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಡಿ.10 ರಿಂದ ಡಿ.14 ರವರೆಗೆ ಅವರು ಮಲೇಷ್ಯಕ್ಕೆ ತೆರಳಲಿದ್ದಾರೆ.