ಕಣ್ಣೂರು, ಡಿ 09( MSP): ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಯಾಗಿದೆ. ಇದರೊಂದಿಗೆ ಇಡೀ ಭಾರತದಲ್ಲಿ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯ ಎಂಬ ಖ್ಯಾತಿಗೆ ಕೇರಳ ಪಾತ್ರವಾಗಿದೆ.
ಕಣ್ಣೂರಿನಿಂದ 16ಕಿ.ಮೀ ದೂರದ ಮಟ್ಟನ್ನೂರ್ ನಲ್ಲಿರುವ ಏರ್ ಪೋರ್ಟ್ ನ್ನು ಅನ್ನು ಇಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಲೋಕಾರ್ಪಣೆ ಮಾಡಿದರು. ಆ ಬಳಿಕ ನಿಲ್ಧಾಣದಲ್ಲಿ ಇಂದಿನಿಂದ ಆರಂಭಗೊಳ್ಳಲಿರುವ ವಿಮಾನಯಾನ ಸೌಲಭ್ಯಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು , ಸಹಾಯಕ ಸಚಿವ ಜಯಂತ್ ಸಿನ್ಹಾ , ಪಿಣರಾಯಿ ವಿಜಯನ್ ಜಂಟಿಯಾಗಿ ಹಸಿರು ನಿಶಾನೆ ತೋರಿಸಿದರು.
ಬೆಳಗ್ಗೆ 9.55 ಕ್ಕೆ ಕಣ್ಣೂರು - ಅಬುದಾಬಿ ವಿಮಾನ ಹಾರಾಟ ನಡೆಸುವ ಮೂಲಕ ಮೊದಲ ಕಣ್ಣೂರು ಏರ್ ಪೋರ್ಟ್ ನಿಂದ ಮೊದಲ ಅಂತಾರಾಷ್ಟೀಯ ಹಾರಾಟ ನಡೆಸಿತು. ಇನ್ನೊಂದೆಡೆ ಇಂದಿನಿಂದಲೇ ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈಗೆ ವಿಮಾನ ಸೇವೆ ಆರಂಭಿಸುವುದಾಗಿ ಏರ್ ಗೋ ಸಂಸ್ಥೆ ತಿಳಿಸಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಕೇರಳ ಹೊಂದಿರುವ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಹೊಸ ವಿಮಾನ ನಿಲ್ದಾಣ ಸಾಕ್ಷಿಯಾಗಲಿದೆ. ಕೊಡಗು, ಮೈಸೂರು ಬೇಕಲ್ ಹಾಗೂ ವಯನಾಡ್ ಗಳಿಗೆ ಬರುವ ದೇಶಿಯ, ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಈ ನಿಲ್ದಾಣ ಪ್ರಮುಖ ತಾಣವಾಗಲಿದೆ.