ಮಂಗಳೂರು, ಡಿ 09( MSP): ವಿವಿಐಪಿಗಳು ತಂಗಲೆಂದು ನಿರ್ಮಿಸಲಾಗಿರುವ ಸರ್ಕ್ಯೂಟ್ ಹೌಸ್ನ ನೂತನ ಐಷಾರಾಮಿ ಕಟ್ಟಡದಲ್ಲಿ ಬೆಂಗಳೂರಿನ ಗಣ್ಯ ವ್ಯಕ್ತಿಯೊಬ್ಬರ ನಾಲ್ಕು ಶ್ವಾನಗಳ ವಾಸ್ತವ್ಯಕ್ಕೆ ಶುಕ್ರವಾರ ಅವಕಾಶ ಕಲ್ಪಿಸಲಾಗಿತ್ತು! - ಈ ಐಷಾರಾಮಿ ಕಟ್ಟಡದಲ್ಲಿ ನಾಯಿಗಳು ವಿಶ್ರಾಂತಿ ಪಡೆಯುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸರ್ಕ್ಯೂಟ್ ಹೌಸ್ನಲ್ಲಿ ಐಷಾರಾಮಿ ಕಟ್ಟಡದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಅತಿಗಣ್ಯರ ವಾಸ್ತವ್ಯಕ್ಕೆಂದೇ ಮೀಸಲಾದ ಕೊಠಡಿಗಳಿವೆ. ಆದರೆ ಬೆಂಗಳೂರಿನ ಗಣ್ಯ ವ್ಯಕ್ತಿಯೊಬ್ಬರ ನಾಯಿಗಳ ವಾಸ್ತವ್ಯಕ್ಕೆ ಹವಾನಿಯಂತ್ರಿತ ಕೋಣೆ ನೀಡಿದ್ದು ಎಷ್ಟು ಸರಿ ಎಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸರಿ ತಪ್ಪುಗಳ ಚರ್ಚೆಯಾಗುತ್ತಿದೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ಪ್ರಾರಂಭವಾದ ಎರಡು ದಿನಗಳ ಶ್ವಾನಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಜರ್ಮನ್ ಶೆಫರ್ಡ್ ತಳಿಯ ನಾಲ್ಕು ನಾಯಿಗಳನ್ನು ತಂದಿದ್ದರು. ಅವುಗಳ ವಾಸ್ತವ್ಯಕ್ಕೆ ಹವಾನಿಯಂತ್ರಿತ ಕೋಣೆಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಖಾಸಗಿ ವಸತಿ ಗೃಹಗಳು, ಹೋಟೆಲ್ಗಳಲ್ಲಿ ನಾಯಿಗಳಿಗೆ ಪ್ರವೇಶಾವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಕೊನೆಗೆ ಆ ವ್ಯಕ್ತಿ ಪಿಡಬ್ಲ್ಯುಡಿ ಅಧಿಕಾರಿಗಳ ಮೊರೆ ಹೋಗಿದ್ದರು. ಅವರು ಸರ್ಕ್ಯೂಟ್ ಹೌಸ್ನಲ್ಲಿರುವ ಐಷಾರಾಮಿ ಕೊಠಡಿಯನ್ನೇ ನಾಯಿಗಳಿಗೆ ನೀಡಿದ್ದರು ಎನ್ನಲಾಗಿದೆ.
ಆದರೆ ಶ್ವಾನಗಳಿಗೆ ಕೊಠಡಿಯನ್ನು ಒದಗಿಸುವ ನಡೆಯನ್ನು ಪಿಡಬ್ಲ್ಯುಡಿ ಅಧಿಕಾರಿಗಳಲ್ಲಿ ಮಾಧ್ಯಮರು ಪ್ರಶ್ನಿಸಿದಾಗ, ಈ ಆರೋಪವನ್ನು ನಿರಾಕರಿಸುತ್ತಿದ್ದಾರೆ. ಶ್ವಾನಗಳಿಗೆ ಯಾವುದೇ ಕೊಠಡಿ ನೀಡಿಲ್ಲ ಎಂದು ಅವರು ಉತ್ತರಿಸಿದ್ದಾರೆ.