ಮಂಗಳೂರು,ಡಿ 09( MSP): ಗೋವಾದಿಂದ 60 ಕಿ.ಮೀ ಅಂತರದವರೆಗೆ ಮೀನುಗಾರರಿಗೆ ಅಂತರ್ ರಾಜ್ಯ ಮೀನುಗಳ ಸಾಗಾಟಕ್ಕೆ ಅವಕಾಶ ನೀಡಲಾಗುವುದು ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಈ ಹಿಂದೆ ತಿಳಿಸಿದ್ದರು.
ಅಲ್ಲದೆ ಗೋವಾ ಸರಕಾರ ಕರ್ನಾಟಕದಿಂದ ಮೀನು ಆಮದಿಗೆ ನಿಷೇಧ ಹೇರಿದ್ದನ್ನು ರದ್ದುಗೊಳಿಸುವ ಸಂಬಂಧ ಅಲ್ಲಿನ ಸರಕಾರದೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂದು ಕರಾವಳಿಯ ಸಂಸದರು, ಬಿಜೆಪಿ ಶಾಸಕರು ಹಾಗೂ ಮೀನುಗಾರಿಕಾ ಮುಖಂಡರನ್ನೊಳಗೊಂಡ ನಿಯೋಗ ತಿಳಿಸಿತ್ತು. ಅಲ್ಲದೆ ಕರ್ನಾಟಕದಿಂದ ಗೋವಾಕ್ಕೆ ಡಿ.6 ರ ಗುರುವಾರದಿಂದ ಮೀನು ಪೂರೈಕೆ ಮತ್ತೆ ಆರಂಭಗೊಂಡಿತ್ತು ಇದರ ಪರಿಣಾಮ ಅಂದೇ ರಾಜ್ಯದ 9 ಟ್ರಕ್ ಮೀನುಗಳು ಗೋವಾ ಮಾರುಕಟ್ಟೆಗೆ ತಲುಪಿತ್ತು.
ಆದರೆ ಗೋವಾಕ್ಕೆ ಮೀನು ಪೂರೈಸಲು ಏಜೆಂಟರ ಬಳಿ ಎಫ್ ಡಿ ಎ ಪರವಾನಿಗೆ ಇಲ್ಲದ ಕಾರಣ ಕಾರವಾರದಿಂದ ಗೋವಾ ಪ್ರವೇಶಿಸುತ್ತಿದ್ದ ಮೀನು ತುಂಬಿದ್ದ 7 ಲಾರಿಗಳನ್ನು ಪೊಲೀಸ್ ಅಧಿಕಾರಿಗಳು ಗಡಿ ಭಾಗ ಪೋಳೆ ಚೆಕ್ ಪೋಸ್ಟ್ ನಲ್ಲಿ ತಡೆ ಹಿಡಿದಿದ್ದಾರೆ. ಶನಿವಾರ ಮುಂಜಾನೆ ಮೀನು ತುಂಬಿದ್ದ 10 ಟ್ರಕ್ ಗಳು ಗೋವ ಗಡಿ ಪ್ರದೇಶವಾದ ಪೋಳೆ ಚೆಕ್ ಪೋಸ್ಟ್ ಗೆ ಬಂದಿದ್ದವು. ಇವುಗಳಲ್ಲಿ ಫಿಶ್ ಮಿಲ್ ಗೆ ಬಂದಿದ್ದ 3 ಟ್ರಕ್ ಗಳಿಗೆ ಪೊಲೀಸರು ಪ್ರವೇಶ ನೀಡಿದರು. ಆದರೆ ಇನ್ನು ಉಳಿದ 7 ಟ್ರಕ್ ಗಳನ್ನು ವಾಪಸ್ ಕಳುಹಿಸಲಾಯಿತು. ಅಲ್ಲದೆ ಮಹಾರಾಷ್ಟ್ರದ ಲಾರಿಗಳನ್ನು ತಡೆಹಿಡಿಯಲಾಗಿದೆ.
ಎಫ್ಡಿಎ ಕಾಯ್ದೆಯಡಿ ಜಾರಿಗೆ ತಂದಿದ್ದ ನಿಯಮಗಳನ್ನು ಪಾಲಿಸುವವರಿಗೆ ಮಾತ್ರ ಗೋವಾ ಮೀನು ಮಾರುಕಟ್ಟೆಗೆ ಪ್ರವೇಶ ನೀಡಲಾಗುವುದು ಎಂದ ಗೋವಾ ಸರ್ಕಾರ ಇದೀಗ ದಿನಕ್ಕೊಂದು ರೂಲ್ಸ್ ಜಾರಿಗೆ ತರುತ್ತಿದೆ ಎಂಬ ಆರೋಪವು ಕೇಳಿಬರುತ್ತಿದೆ. ಇನ್ಸುಲೇಟೆಡ್ ವೆಹಿಕಲ್ ಗಳ ಮೂಲಕ ಮಾತ್ರ ಮೀನನ್ನು ರವಾನೆ ಮಾಡಬೇಕು ಎಂದ ಗೋವಾ ಸರ್ಕಾರದ ನಿಯಮದಂತೆ ಇನ್ಸುಲೇಟೆಡ್ ವೆಹಿಕಲ್ ಗಳ ಮೂಲಕ ಮಾತ್ರ ಮೀನುಗಳನ್ನು ಕಳುಹಿಸಿಕೊಡಲಾಗಿತ್ತು. ಆದರೆ ಇದೀಗ ಎಫ್ಡಿಎ ಪರವಾನಿಗೆ ಇಲ್ಲವೆಂಬ ಕಾರಣದಿಂದ ಟ್ರಕ್ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ಮತ್ತೆ ರಾಜ್ಯದ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ.