ಬಂಟ್ವಾಳ, ಡಿ 09( MSP): ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಬಂಟ್ವಾಳ ಇಂದಿರಾ ಕ್ಯಾಂಟೀನ್, ಉದ್ಘಾಟನಾ ದಿನವೂ ಕೂಡಾ ಕಾಂಗ್ರೆಸ್ ಹಾಗೂ ಬಿಜೆಪಿ ಜಟಾಪಟಿಯಿಂದ ಸುದ್ದಿಯಾಗಿದೆ. ಡಿ. 9 ರಂದು ಬಂಟ್ವಾಳ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ದಿನ ನಿಗದಿಯಾಗಿತ್ತು. ಅದರೆ ಉದ್ಘಾಟನೆಯ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದ ಪ್ರಸಂಗ ನಡೆಯಿತು. ಸರಕಾರಿ ಕಾರ್ಯಕ್ರಮ ದಲ್ಲಿ ಗಲಭೆ ಸೃಷ್ಟಿಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬೆಂಬಲಿಗರು ಕಾರ್ಯಕ್ರಮದಿಂದ ಹೊರನಡೆದರು.
ಘಟನೆ ಬಳಿಕ ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಅಲ್ಲಿ ಕೆಲವರ ಗೂಂಡಾಗಿರಿ ಪ್ರವೃತ್ತಿಯಿಂದ ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದ್ದು ಬಂಟ್ವಾಳ ಜಿ.ಪಂ.ಸದಸ್ಯ ಹಾಗೂ ಅವರ ಬೆಂಬಲಿಗರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರಕಾರಿ ಕಾರ್ಯಕ್ರಮ ವನ್ನು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮದಂತೆ ಮಾರ್ಪಾಡು ಮಾಡಿದಲ್ಲದೆ, ಕಾಂಗ್ರೆಸ್ ಪರ ಘೋಷಣೆ ಕೂಗಿ ಗಲಭೆ ಸೃಷ್ಟಿ ಮಾಡಿದ್ದಾರೆ. ಸರಕಾರಿ ಕಾರ್ಯಕ್ರಮ ಪ್ರೋಟೋಕಾಲ್ ಪ್ರಕಾರ ನಡೆಯದೆ ಕಾಂಗ್ರೆಸ್ ಪ್ರೋಟೋ ಕಾಲ್ ಪ್ರಕಾರ ನಡೆದಿದೆ ಎಂದು ಆರೋಪಿಸಿದರು.
ಇನ್ನೊಂದೆಡೆ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಉದ್ಘಾಟಕರಾಗಿ ಹೋಗಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮ ಒಗ್ಗಟ್ಟಿನಿಂದ ನಡೆಯಬೇಕಿತ್ತು. ಆದರೆ ಯಾವುದೋ ಒಂದು ಗುಂಪು ಕಾರ್ಯಕ್ರಮವನ್ನು ಕೆಡಿಸಬೇಕು ಈ ಕೃತ್ಯ ಎಸಗಿದೆ. ಈ ಘಟನೆ ಬಗ್ಗೆದಕ್ಷಿಣ ಕನ್ನಡದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಇಂತಹ ಸಣ್ಣ ಘಟನೆಗಳನ್ನು ದಯವಿಟ್ಟು ದೊಡ್ಡದು ಮಾಡಬೇಡಿ. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.