ಮಂಗಳೂರು,ಡಿ 10 (MSP): ನಗರದ ಬಂಟ್ಸ್ ಹಾಸ್ಟೆಲ್ ವೃತ್ತ ಬಳಿ ರಸ್ತೆ ಅಭಿವೃದ್ಧಿಗೆ ತಡೆಯಾಗಿದ್ದ, ಕಡಿಯಲು ಉದ್ದೇಶಿಸಲಾಗಿದ್ದ , ಸುಮಾರು 200 ವರ್ಷಗಳ ಹಳೆಯ ಅಶ್ವತ್ಥ ಮರವನ್ನು ಬುಡ ಸಮೇತ ಭಾನುವಾರ 500 ಮೀ.ದೂರ ಇರುವ ಸಿವಿನಾಯಕ್ ಹಾಲ್ ಮುಂಭಾಗ ಸ್ಥಳಾಂತರಿಸಲಾಯಿತು.
ಈ ಮೂಲಕ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪುರಾತನ, ಬೃಹತ್ ಗಾತ್ರದ ಮರವೊಂದನ್ನು ಸ್ಥಳಾಂತರಿಸಲಾಗಿದೆ. ರಸ್ತೆ ಅಭಿವೃದ್ದಿಯ ನೆಪದಲ್ಲಿ ಧರಶಾಯಿಯಾಗಬೇಕಾಗಿದ್ದ ಮರಕ್ಕೆ ಮರುಜೀವ ನೀಡಿದಂತಾಗಿದೆ. ಈ ಹಿಂದೆ ಪಂಪ್ ವೆಲ್ ಹಾಗೂ ಊರ್ವದಲ್ಲಿ ಎರಡು ಮರಗಳನ್ನು ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು.
ಬೆಳಗ್ಗೆ 5.30 ಕ್ಕೆ ಆರಂಭವಾದ ಕಾರ್ಯಾಚರಣೆ ರಾತ್ರಿಯವರೆಗೆ ಮುಂದುವರಿಯಿತು. ಮರವನ್ನು ಬುಡ ಸಹಿತ ತೆಗೆಯಲು 12 ಗಂಟೆಗಳ ಅವಧಿ ಬೇಕಾಯಿತು. ಬ್ರ್ಹತ್ ಕ್ರೇನ್ ಹಾಗೂ 18 ಚಕ್ರದ ಬೃಹತ್ ಟ್ರಾಲಿಯಲ್ಲಿ ಸಾಗಿಸಿ ಮತ್ತೆ ನಾಟಿ ಮಾಡಲಾಯಿತು. ಸಂಪೂರ್ಣ ಪ್ರತಿಕ್ರಿಯೆ ಮುಗಿಯುವಾಗ ರಾತ್ರಿಯಾಗಿತ್ತು. ನರ ನೆಡಲೆಂದೇ ಬೃಹತ್ ಗುಂಡಿ ಮಾಡಿ ಅದಕ್ಕೆ ನೀರು ಗೊಬ್ಬರ ಹಾಕಿ ಸೆಣಬಿನ ಗೋಣಿಗಳನ್ನು ಹಾಕಿ ಅದರ ಮೇಲೆ ಮರ ನೆಡಲಾಯಿತು. ಮರ ತೆರವು ಕಾರ್ಯಾಚರಣೆಗೆ 2 ಲಕ್ಷ ರೂ. ವೆಚ್ಚ ತಗಲಿರಬಹುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಇದಕ್ಕೂ ಮುಂಚೆ ಶುಕ್ರವಾರ ರಾತ್ರೋರಾತ್ರಿ ಈ ಮರವನ್ನು ಕಡಿಯಲು ಪಾಲಿಕೆ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಪರಿಸರ ಪ್ರೇಮಿಗಳು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ತಡೆದ ಕಾರಣ ಮರ ಹಾಗೆ ಉಳಿಯಿತು. ಹಿಂದೂ ಧರಮದಲ್ಲಿ ಈ ಮರದ ಬಗ್ಗೆ ಪೂಜ್ಯನೀಯ ನಂಬಿಕೆ ಇರುವುದರಿಂದ ಬಹುತೇಕ ಜನರು ಜನರು ಪೂಜೆ ಕೂಡಾ ಸಲ್ಲಿಸುತ್ತಿದ್ದರು. ಕೊನೆಗೆ ಸ್ಥಳೀಯರ ಒತ್ತಾಯಕ್ಕೆ ಮಣಿದ ಮಹಾನಗರ ಪಾಲಿಕೆ ಭಾನುವಾರ ಮರವನ್ನೇ ಸ್ಥಳಾಂತರಿಸಲು ನಿರ್ಧರಿಸಿ ಯಶಸ್ವಿ ಕಂಡಿದೆ.